ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆಎಲ್‌ಇ ಶಾಲೆಯಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಶಿಕ್ಷಕ ವಿರೇಂದ್ರ ಗಂಗಲ್ ಮಾತನಾಡಿ, ಯೋಗವು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡುವ ಭಾರತೀಯರ ಪ್ರಾಚೀನ ಪರಂಪರೆಯಾಗಿದ್ದು, ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲೆ ಕಲ್ಪನಾ ಚಚಡಿ ಮಾತನಾಡಿ, ಸಂಗೀತವು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಮನಸ್ಸಿಗೆ ಸಂತೋಷ, ಶಾಂತಿ ಹಾಗೂ ನೆಮ್ಮದಿಯನ್ನು ನೀಡುತ್ತದೆ. ಸಂಗೀತ ಆಲಿಸುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯೋಗ ತರಬೇತುದಾರರಾದ ಗಿರಿಜಾ ಮುತ್ತಿನಪೆಂಡಿಮಠ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳ ಪ್ರದರ್ಶನ ನೀಡಿದರು.
ಸಂಗೀತ ಶಿಕ್ಷಕಿ ಶೋಭಾ ಬಡಿಗೇರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ವಿಕ್ಟರ್ ಝಳಕಿ ಹಾಗೂ ಸ್ವಪ್ನೀಲ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಗೀತ ಕಲಾ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದರು.
ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.



