ವಿಜಯಸಾಕ್ಷಿ ಸುದ್ದಿ, ಗದಗ: ಬಡಜನರ ಕಲ್ಯಾಣ, ಉಚಿತ ಶಿಕ್ಷಣ, ಆರೋಗ್ಯ ಹಾಗೂ ವಸತಿ ಭರವಸೆ ನೀಡಿ ಅಧಿಕಾರಕ್ಕೆ ಬರುವ ಸರ್ಕಾರಗಳು ಬಳಿಕ ಶ್ರೀಮಂತರು ಹಾಗೂ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದು ಬೇಲೂರು ಗುರುಬಸವೇಶ್ವರ ಮಠದ ಪರಮಪೂಜ್ಯ ಡಾ. ಪ್ರಭು ಮಹಾಂತ ಮಹಾಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಲಾಯನ್ಸ್ ಭವನದಲ್ಲಿ ಶನಿವಾರ ಸ್ಲಂ ಜನಾಂದೋಲನ-ಕರ್ನಾಟಕ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿನಿಧಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಆಧಾರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಇದೀಗ ಫಲಾನುಭವಿಗಳ ಮರುಪರಿಶೀಲನೆ ನಡೆಸುತ್ತಿರುವುದು ಬಡವರಿಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಸ್ಲಂ ನಿವಾಸಿಗಳ ಹಕ್ಕುಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಬಡವರ ಹೋರಾಟಗಳಿಗೆ ತಾವು ಸದಾ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ಸಮ್ಮೇಳನದ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರ ಮರೆತಿದೆ. ಸ್ಲಂ ನಿವಾಸಿಗಳಿಗೆ ಉಚಿತ ಮನೆ, ನಿವೇಶನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಮಾತನಾಡಿ, ದೇಶದಲ್ಲಿ ಸಾರ್ವಜನಿಕ ಆಸ್ತಿಗಳ ಖಾಸಗೀಕರಣ ವೇಗವಾಗಿ ನಡೆಯುತ್ತಿದ್ದು, ಬಡವರು ಇನ್ನೂ ಮನೆ ಹಾಗೂ ನಿವೇಶನಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಮುಂದುವರಿದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಮ್ಮೇಳನಕ್ಕೂ ಮುನ್ನ ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೃಹತ್ ಜಾಥಾ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿದ ಜಾಥಾದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ಹಡಪದ, ಬಸವರಾಜ ಪೂಜಾರ, ಪೂರ್ಣ ರವಿಶಂಕರ್, ವೆಂಕಟೇಶಯ್ಯ, ಶೇಖಣ್ಣ ಕವಳಿಕಾಯಿ, ಇಮ್ತಿಯಾಜ್ ಆರ್. ಮಾನ್ವಿ, ಅಶೋಕ ಕುಡತಿನಿ, ಜನಾರ್ಧನ ಹಳ್ಳಿಬೆಂಚಿ, ಶೋಭಾ ಕಮತರ, ರೇಣುಕಾ ಸರಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಬಡವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರಗಳು ಇಂದು ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಸ್ಲಂ ಜನರ ಹಕ್ಕುಗಳಿಗೆ ಸರ್ಕಾರಗಳು ನ್ಯಾಯ ಒದಗಿಸಬೇಕು.”
– ಡಾ. ಪ್ರಭು ಮಹಾಂತ ಮಹಾಸ್ವಾಮೀಜಿ, ಬೇಲೂರು ಗುರುಬಸವೇಶ್ವರ ಮಠ



