ವಿಜಯಸಾಕ್ಷಿ ಸುದ್ದಿ, ಗದಗ: ಯೋಗವು ಕೇವಲ ದೈಹಿಕ ಕಸರತ್ತು ಅಥವಾ ವ್ಯಾಯಾಮವಲ್ಲ. ಅದು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಕಾಪಾಡುವ ಮಹಾನ್ ವಿಜ್ಞಾನವಾಗಿದ್ದು, ಆರೋಗ್ಯ ರಕ್ಷಣೆ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಾಡುವುದು ಅತ್ಯಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸರ್ವಯೋಗ ಸಂಸ್ಥೆಗಳ ಸಹಯೋಗದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ-2026 ಅಂಗವಾಗಿ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದಡಿ ಶನಿವಾರ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಜನಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಋಷಿಮುನಿಗಳು, ವಿಶೇಷವಾಗಿ ಮಹರ್ಷಿ ಪತಂಜಲಿ ಅವರು ಜಗತ್ತಿಗೆ ನೀಡಿರುವ ಯೋಗ ಎಂಬ ಅಮೂಲ್ಯ ಕೊಡುಗೆಯನ್ನು ಪ್ರತಿಯೊಬ್ಬರೂ ಜೀವನದ ಭಾಗವಾಗಿಸಿಕೊಳ್ಳಬೇಕು. ಆರೋಗ್ಯಕರ ಬದುಕಿಗಾಗಿ ದಿನದ 24 ಗಂಟೆಗಳಲ್ಲಿ ಕನಿಷ್ಠ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಯೋಗಾಭ್ಯಾಸಕ್ಕೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಯೋಗವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಮಹತ್ವದ್ದಾಗಿದೆ. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗದ ಮಹತ್ವವನ್ನು ಪ್ರತಿಪಾದಿಸಿದ ಬಳಿಕ ವಿಶ್ವದಾದ್ಯಂತ ಯೋಗ ದಿನಾಚರಣೆಗೆ ಮಾನ್ಯತೆ ದೊರೆತಿದ್ದು, ಇಂದು ಅದು ಜಾಗತಿಕ ಆರೋಗ್ಯ ಚಳವಳಿಯಾಗಿ ಬೆಳೆದಿದೆ ಎಂದು ಹೇಳಿದರು.
ಮುನ್ಸಿಪಲ್ ಕಾಲೇಜು ಆವರಣದಿಂದ ಆರಂಭವಾದ ಜಾಥಾವು ಗಾಂಧಿ ಸರ್ಕಲ್, ರೋಟರಿ ಸರ್ಕಲ್, ಹಳೆ ಬಸ್ ನಿಲ್ದಾಣ, ಟಾಂಗಾ ಕೂಟ, ಮಹೇಂದ್ರಕರ ಸರ್ಕಲ್, ಶಹಪೂರ ಪೇಟೆ ಮಾರ್ಗವಾಗಿ ಸಂಚರಿಸಿ ಮತ್ತೆ ಮುನ್ಸಿಪಲ್ ಕಾಲೇಜು ಆವರಣಕ್ಕೆ ತಲುಪಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜುಬೇದಾ ಬೇಗಂ ತಿಗಳೇರ, ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಸಂಜೀವ ನಾರಪ್ಪನವರ, ಬ್ರಹ್ಮಕುಮಾರಿ ಪ್ರತಿನಿಧಿಗಳು, ಸಂಘದ ಕಾರ್ಯದರ್ಶಿ ಡಾ. ಬಿ.ಎಂ. ಲೋಕಪುರಿ, ಡಾ. ಎಂ.ಎಂ. ಹಾದಿಮನಿ, ಡಾ. ಸಾಯಿಪ್ರಕಾಶ, ಆಡಳಿತಾಧಿಕಾರಿ ಸುಧಾ ಜಾಲಿಹಾಳ, ಆಯುರ್ವೇದ ಕಾಲೇಜಿನ ಡಾ. ಕೊಟ್ರು ಶೆಟ್ರು, ಆರೋಗ್ಯ ಇಲಾಖೆಯ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ, ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
“ಇಂದಿನ ಆಧುನಿಕ ಬದುಕಿನಲ್ಲಿ ಅಧಿಕಾರ, ಅಂತಸ್ತು, ಸಂಪತ್ತಿಗಿಂತ ಆರೋಗ್ಯವೇ ದೊಡ್ಡ ಸಂಪತ್ತು. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಪ್ರತಿದಿನ ಯೋಗಾಭ್ಯಾಸ ಮಾಡಬೇಕು.”
ಎಸ್.ವಿ. ಸಂಕನೂರು, ವಿಧಾನ ಪರಿಷತ್ ಸದಸ್ಯರು
ಯೋಗದ ಮಹತ್ವ ಸಾರಿದ ವಿದ್ಯಾರ್ಥಿಗಳು
ರೋಣ ಆಯುರ್ವೇದ ಕಾಲೇಜು ಹಾಗೂ ಬಿದರೂರು ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯೋಗ ಜಾಗೃತಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನ ಸೆಳೆದರು. “ಯೋಗ ಮಾಡಿ ರೋಗ ಓಡಿಸಿ” ಎಂಬ ಸಂದೇಶ ಜಾಥಾದ ಪ್ರಮುಖ ಆಕರ್ಷಣೆಯಾಗಿತ್ತು.

