ದಾವಣಗೆರೆ: ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಕೈದಾಳೆ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ಅಮೂಲ್ಯ ಎಂದು ಗುರುತಿಸಲಾಗಿದೆ.
ಅಮೂಲ್ಯ ಅದೇ ಗ್ರಾಮದ ಧನುಷ್ (19) ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇಬ್ಬರೂ ಸಹಪಾಠಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಜಾತಿ ಕಾರಣದಿಂದಾಗಿ ಇವರ ಪ್ರೀತಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಇಬ್ಬರೂ ಪೊಲೀಸ್ ಭದ್ರತೆಯಲ್ಲಿ ವಿವಾಹವಾಗಿದ್ದರು ಎನ್ನಲಾಗಿದೆ.
ಮದುವೆಯಾಗಿ ಕೇವಲ ಒಂದು ವರ್ಷ ಕಳೆದಿರುವಾಗಲೇ ಅಮೂಲ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಯುವತಿಯ ಸಾವಿನ ಕುರಿತು ಆಕೆಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಪತಿ ಧನುಷ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಈ ಸಂಬಂಧ ಧನುಷ್ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಯುವತಿಯ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯ ಬಳಿಕವೇ ತಿಳಿದುಬರಬೇಕಿದೆ.



