ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಇದೀಗ ಹೈಕೋರ್ಟ್‌ನಲ್ಲಿ ಮಹತ್ವದ ಘಟ್ಟ ತಲುಪಿದ್ದು, ಸ್ವಾಮೀಜಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನಿನ ಭವಿಷ್ಯ ಇಂದು ನಿರ್ಧಾರವಾಗುವ ಸಾಧ್ಯತೆ ಇದೆ.
ಸ್ವಾಮೀಜಿಗೆ ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಲಿದೆ.
ಪ್ರಕರಣದಲ್ಲಿ ಈಗಾಗಲೇ ಸ್ವಾಮೀಜಿ ಜಾಮೀನು ಪಡೆದ ರೀತಿಗೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಮೇ 7ರಂದು ಪೋಕ್ಸೋ ಪ್ರಕರಣ ದಾಖಲಾಗಿದ್ದರೆ, ಅದರ ಹಿಂದಿನ ದಿನವೇ ಅಂದರೆ ಮೇ 6ರಂದು ನಿರೀಕ್ಷಣಾ ಜಾಮೀನು ಪಡೆದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ನೀಡಿರುವ ಕ್ರಮ ಮೇಲ್ನೋಟಕ್ಕೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ, ಈ ಸಂಬಂಧ ವಚನಾನಂದ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿತ್ತು.
ಇಂದು ನಡೆಯಲಿರುವ ವಿಚಾರಣೆಗೆ ಸ್ವಾಮೀಜಿ ಹಾಜರಾಗುವ ಸಾಧ್ಯತೆಯಿದ್ದು, ಪ್ರಕರಣದ ಬೆಳವಣಿಗೆಗಳತ್ತ ಭಕ್ತರು ಹಾಗೂ ಸಾರ್ವಜನಿಕರು ತೀವ್ರ ಕುತೂಹಲದಿಂದ ಗಮನ ಹರಿಸಿದ್ದಾರೆ.
ಇದೇ ವೇಳೆ, ಹರಿಹರ ಪಂಚಮಸಾಲಿ ಪೀಠದ ಭಕ್ತರ ವಲಯದಲ್ಲೂ ಚರ್ಚೆಗಳು ಜೋರಾಗಿದ್ದು, ಸ್ವಾಮೀಜಿ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ವಾಕ್ಸಮರ ಮುಂದುವರಿದಿದೆ.
ಪೊಲೀಸರು ಈಗಾಗಲೇ 410 ಪುಟಗಳ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಹೈಕೋರ್ಟ್‌ನಲ್ಲಿ ನಡೆಯಲಿರುವ ಇಂದಿನ ವಿಚಾರಣೆ ಪ್ರಕರಣದ ಮುಂದಿನ ಹಂತಕ್ಕೆ ದಿಕ್ಕು ತೋರಿಸಲಿದೆ.



