ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅಬಕಾರಿ ಸುಧಾರಣೆಗಳು ಮತ್ತು ಹೊಸ ದರ ಪರಿಷ್ಕರಣೆ ನೀತಿಯ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಭಾರೀ ಏರಿಕೆ ದಾಖಲಾಗಿದ್ದು, ಸರ್ಕಾರದ ಖಜಾನೆಗೆ ಹೆಚ್ಚಿನ ಆದಾಯ ಹರಿದು ಬಂದಿದೆ.
ಕಡಿಮೆ ಪ್ರಮಾಣದ ಆಲ್ಕೋಹಾಲ್ ಅಂಶ ಹೊಂದಿರುವ ಕೆಲವು ಬಿಯರ್ ಬ್ರ್ಯಾಂಡ್‌ಗಳ ಬೆಲೆಯನ್ನು ಇಳಿಕೆ ಮಾಡಿದ ನಂತರ, ರಾಜ್ಯದಲ್ಲಿ ಬಿಯರ್ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಮೇ 11ರಿಂದ ಜೂನ್ 11ರವರೆಗಿನ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ಅಬಕಾರಿ ಕಂದಾಯ ಸಂಗ್ರಹಣೆಯಲ್ಲಿ ಶೇ.14.84ರಷ್ಟು ಏರಿಕೆ ದಾಖಲಾಗಿದೆ.
ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ 54.6 ಲಕ್ಷ ಕೇಸ್‌ಗಳಷ್ಟು ಬಿಯರ್ ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಯ 35.3 ಲಕ್ಷ ಕೇಸ್‌ಗಳಿಗೆ ಹೋಲಿಸಿದರೆ ಗಮನಾರ್ಹ ಏರಿಕೆ ಕಂಡುಬಂದಿದೆ.
ಇನ್ನೊಂದೆಡೆ, ಭಾರತೀಯ ತಯಾರಿಕೆಯ ವಿದೇಶಿ ಮದ್ಯ (IML) ಮಾರಾಟದಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡುಬಂದಿದೆ. ಕಳೆದ ವರ್ಷ 54.74 ಲಕ್ಷ ಕೇಸ್ ಇದ್ದ ಮಾರಾಟ ಈ ಬಾರಿ 54.55 ಲಕ್ಷ ಕೇಸ್‌ಗಳಿಗೆ ಇಳಿದಿದೆ.
ಬಿಯರ್ ಮಾರಾಟದ ಏರಿಕೆಯ ಪರಿಣಾಮವಾಗಿ ರಾಜ್ಯದ ಒಟ್ಟು ಅಬಕಾರಿ ಆದಾಯವು ಕಳೆದ ವರ್ಷದ 3,261.24 ಕೋಟಿ ರೂಪಾಯಿಗಳಿಂದ ಈ ಬಾರಿ 3,745.14 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಕಳೆದ 2025-26ನೇ ಆರ್ಥಿಕ ವರ್ಷದಲ್ಲಿ ಬಿಯರ್ ಮಾರಾಟ ಶೇ.11.3ರಷ್ಟು ಕುಸಿತ ಕಂಡು 399.29 ಲಕ್ಷ ಕೇಸ್‌ಗಳಿಗೆ ಇಳಿಕೆಯಾಗಿತ್ತು. ಆದರೆ ಈ ಬಾರಿ ಸರ್ಕಾರ ಜಾರಿಗೆ ತಂದಿರುವ ಹೊಸ ಆಲ್ಕೋಹಾಲ್ ಆಧಾರಿತ ತೆರಿಗೆ ನೀತಿ ಹಾಗೂ ಬೇಸಿಗೆಯ ತೀವ್ರ ಬಿಸಿಲಿನ ವಾತಾವರಣದಿಂದಾಗಿ ಬಿಯರ್ ಮಾರಾಟ ಮತ್ತೆ ಚೇತರಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಾರು ಮಳೆಯ ಆಗಮನದೊಂದಿಗೆ ಹವಾಮಾನ ತಂಪಾಗಲಿರುವುದರಿಂದ ಮುಂದಿನ ದಿನಗಳಲ್ಲಿ ಮಾರಾಟದಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಆದಾಗ್ಯೂ, ಸರ್ಕಾರದ ಹೊಸ ದರ ನೀತಿಯು ಮದ್ಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವುದಾಗಿ ಅಬಕಾರಿ ವಲಯದಲ್ಲಿ ಚರ್ಚೆಯಾಗುತ್ತಿದೆ.



