ಚಾಮರಾಜನಗರ: ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯಲ್ಲಿ ಚಿರತೆ ದಾಳಿಗಳು ಮರುಕಳಿಸುತ್ತಿರುವ ಬೆನ್ನಲ್ಲೇ ಅರಣ್ಯ ಇಲಾಖೆಯ ಕಾರ್ಯವೈಖರಿಯ ವಿರುದ್ಧ ಆದಿವಾಸಿ ಸೋಲಿಗ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆನೆಹೊಲ ಹಾಡಿಯಲ್ಲಿ ಆದಿವಾಸಿ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆಯ ಬಳಿಕ ಸ್ಥಳೀಯರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸ್ಥಳೀಯರ ಪ್ರಕಾರ, ಬೇರೆ ಪ್ರದೇಶಗಳಲ್ಲಿ ಸೆರೆಹಿಡಿಯಲಾಗುವ ಚಿರತೆಗಳನ್ನು ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಾಲಾರ್ ಹಾಗೂ ಪೊನ್ನಾಚಿ ಕಾಡು ಪ್ರದೇಶಗಳಲ್ಲಿ ಮತ್ತೆ ಬಿಡಲಾಗುತ್ತಿದೆ. ಇದರಿಂದ ಹಾಡಿಗಳ ಸುತ್ತಮುತ್ತ ಚಿರತೆಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರು ಹಾಗೂ ಜಾನುವಾರುಗಳ ಜೀವಕ್ಕೆ ನಿರಂತರ ಅಪಾಯ ಎದುರಾಗಿದೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಮಾದಪ್ಪನ ಬೆಟ್ಟದಲ್ಲಿ ಪಾದಯಾತ್ರಿಕನ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿದು ಕಾಲರ್ ಐಡಿ ಅಳವಡಿಸಿದ ಬಳಿಕ ಮತ್ತೆ ಇದೇ ಕಾಡು ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. ನಂತರವೂ ಹಸು, ಮೇಕೆ ಸೇರಿದಂತೆ ಸಾಕುಪ್ರಾಣಿಗಳ ಮೇಲೆ ಪದೇಪದೆ ದಾಳಿಗಳು ನಡೆದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇತ್ತೀಚೆಗೆ ಪೊನ್ನಾಚಿ ಸಮೀಪದ ಕಕ್ಕೆಹೊಲ ಗ್ರಾಮದಲ್ಲಿ ಅಳವಡಿಸಿದ್ದ ಪಂಜರಕ್ಕೆ ಬಿದ್ದ ಚಿರತೆಯ ಕತ್ತಿನಲ್ಲೂ ಕಾಲರ್ ಐಡಿ ಪತ್ತೆಯಾಗಿರುವುದು ಜನರ ಅನುಮಾನಕ್ಕೆ ಮತ್ತಷ್ಟು ಬಲ ನೀಡಿದೆ. ಈಗಾಗಲೇ ಚಿರತೆ ದಾಳಿಗಳಿಂದ ಭಯಭೀತರಾಗಿರುವ ಸೋಲಿಗರು, ಕಾಡುಪ್ರಾಣಿಗಳ ನಿರ್ವಹಣೆಯಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಘಟನೆಗಳ ಸರಣಿಯಿಂದ ಕಂಗಾಲಾಗಿರುವ ಗ್ರಾಮಸ್ಥರು, ಕಾಡಂಚಿನ ಹಾಡಿಗಳ ಸುರಕ್ಷತೆಗೆ ವಿಶೇಷ ಕಾರ್ಯಯೋಜನೆ ರೂಪಿಸುವಂತೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.



