ಬೆಳಗಾವಿ: ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ವಿರುದ್ಧ ಇಡಿ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ, ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ವಿರುದ್ಧ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಭಾವರಾಗಿರುವ ಮಂಜುನಾಥ್ ಅವರ ಮೇಲೆ ಬೇನಾಮಿ ಆಸ್ತಿ, ಅಕ್ರಮ ಹೂಡಿಕೆ ಮತ್ತು ಹಣ ವರ್ಗಾವಣೆ ಆರೋಪಗಳ ಹಿನ್ನೆಲೆ ಇಡಿ ಅಧಿಕಾರಿಗಳು ಬುಧವಾರ ಮುಂಜಾನೆ ದಾಳಿ ನಡೆಸಿದ್ದಾರೆ.
ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ಆರು ಪ್ರಮುಖ ಸ್ಥಳಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಮಹತ್ವದ ದಾಖಲೆಗಳು, ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮಂಜುನಾಥ್ ಅವರ ನಿವಾಸ ಮಾತ್ರವಲ್ಲದೆ ಅವರ ಆಪ್ತರು, ಸ್ನೇಹಿತರು ಹಾಗೂ ವ್ಯವಹಾರಿಕ ಸಂಪರ್ಕ ಹೊಂದಿರುವವರ ಮನೆಗಳ ಮೇಲೂ ಶೋಧ ನಡೆದಿದೆ.
ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಕುಟುಂಬದ ಮನೆಗಳು, ಬೆಳಗಾವಿಯಲ್ಲಿನ ಹೈಟೆಕ್ ಅಪಾರ್ಟ್‌ಮೆಂಟ್ ಹಾಗೂ ಅಥಣಿ ತಾಲೂಕಿನ ಐನಾಪುರದಲ್ಲಿರುವ ಆಪ್ತರ ನಿವಾಸಗಳು ತನಿಖೆಯ ವ್ಯಾಪ್ತಿಗೆ ಬಂದಿವೆ. ಗೋವಾ ಸೇರಿದಂತೆ ರಾಜ್ಯದ ಹೊರಭಾಗಗಳಲ್ಲೂ ಇಡಿ ಅಧಿಕಾರಿಗಳು ಸಮನ್ವಯ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ತನಿಖಾ ಮೂಲಗಳ ಪ್ರಕಾರ, ಅಬಕಾರಿ ಇಲಾಖೆಯಲ್ಲಿನ ಪ್ರಭಾವಿ ಹುದ್ದೆಯನ್ನು ಬಳಸಿಕೊಂಡು ಬೇನಾಮಿ ಹೆಸರಿನಲ್ಲಿ ಭಾರೀ ಪ್ರಮಾಣದ ಭೂಮಿ, ಬಾರ್‌ಗಳು ಮತ್ತು ವಾಣಿಜ್ಯ ಆಸ್ತಿಗಳನ್ನು ಸಂಪಾದಿಸಿರುವ ಆರೋಪಗಳಿವೆ. ಗೋವಾ-ಮಹಾರಾಷ್ಟ್ರ ಗಡಿ ಭಾಗದ ಕೆಲವು ಅನುಮಾನಾಸ್ಪದ ಹಣಕಾಸು ವ್ಯವಹಾರಗಳು ಹಾಗೂ ಆಸ್ತಿ ಹೂಡಿಕೆಗಳ ಕುರಿತಂತೆ ಇಡಿ ವಿಶೇಷ ಗಮನ ಹರಿಸಿದೆ.
ಸಚಿವರ ಕುಟುಂಬದ ನಿಕಟ ಸಂಬಂಧಿಯ ವಿರುದ್ಧ ಜಾರಿ ನಿರ್ದೇಶನಾಲಯ ಕೈಗೊಂಡಿರುವ ಈ ಕ್ರಮ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ತನಿಖೆ ಮುಂದುವರಿದಂತೆ ಇನ್ನಷ್ಟು ಪ್ರಭಾವಿ ಹೆಸರುಗಳು ಬೆಳಕಿಗೆ ಬರುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.



