ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚಕರ ಹೊಸ ಜಾಲವೊಂದು ಬಯಲಾಗಿದ್ದು, ಶವಸಂಸ್ಕಾರಕ್ಕಾಗಿ ಆನ್‌ಲೈನ್ ಸ್ಲಾಟ್ ಬುಕ್ಕಿಂಗ್ ಮಾಡುವ ಹೆಸರಿನಲ್ಲಿ ಸಾರ್ವಜನಿಕರಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ಹೆಬ್ಬಾಳ ಕೆಂಪಾಪುರದ ‘ಚಿರಶಾಂತಿಧಾಮ’ ಮತ್ತು ಮೇಡಿ ಅಗ್ರಹಾರದ ‘ಮುಕ್ತಿಧಾಮ’ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಕೇವಲ ₹250 ಅಧಿಕೃತ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಸೈಬರ್ ಖದೀಮರು ನಕಲಿ ವೆಬ್‌ಸೈಟ್‌ಗಳು ಮತ್ತು ಲಿಂಕ್‌ಗಳನ್ನು ಸೃಷ್ಟಿಸಿ, ತಾವೇ ಅಧಿಕೃತ ಏಜೆಂಟ್‌ಗಳು ಎಂದು ಬಿಂಬಿಸಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿರುವುದು ಪತ್ತೆಯಾಗಿದೆ.
ಸಾವಿನ ದುಃಖದಲ್ಲಿರುವ ಕುಟುಂಬಸ್ಥರು ತುರ್ತಾಗಿ ಸ್ಲಾಟ್ ಬುಕ್ಕಿಂಗ್ ಮಾಡಲು ಮುಂದಾದಾಗ ಅವರ ಪರಿಸ್ಥಿತಿಯನ್ನೇ ದುರುಪಯೋಗಪಡಿಸಿಕೊಳ್ಳುವ ಈ ಜಾಲ, ಅಧಿಕೃತ ಶುಲ್ಕಕ್ಕಿಂತ ಹಲವು ಪಟ್ಟು ಹೆಚ್ಚು ಹಣ ಪಡೆದು ವಂಚನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಮನಗಂಡಿರುವ ಬೆಂಗಳೂರು ಉತ್ತರ ನಗರ ಪಾಲಿಕೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಮೂರನೇ ವ್ಯಕ್ತಿ ಅಥವಾ ಖಾಸಗಿ ವೆಬ್‌ಸೈಟ್‌ಗಳ ಮೂಲಕ ಬುಕ್ಕಿಂಗ್ ಮಾಡಬಾರದು ಎಂದು ಮನವಿ ಮಾಡಿದೆ.
ಈ ಸಂಬಂಧ ಯಲಹಂಕದ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ನಕಲಿ ವೆಬ್‌ಸೈಟ್‌ಗಳ ಹಿಂದೆ ಇರುವ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.



