ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮದ ರಥೋತ್ಸವದ ಕುರಿತು ಇತ್ತೀಚೆಗೆ ಉಂಟಾಗಿರುವ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಭಕ್ತರು ನೀಡುವ ದೇಣಿಗೆಗೆ ಜಾತಿಯ ಬಣ್ಣ ಹಚ್ಚುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬುಧವಾರ ಆಶ್ರಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥೋತ್ಸವದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ನಾಲ್ಕು ವರ್ಷಗಳಿಂದ ರಥೋತ್ಸವ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದ್ದು, ವಿವಿಧ ಸಮುದಾಯಗಳ ಭಕ್ತರು ಆಶ್ರಮಕ್ಕೆ ದೇಣಿಗೆ ನೀಡುವುದು ಸಂಪ್ರದಾಯವಾಗಿದೆ ಎಂದರು.
ಪೀರಸಾಬ ದಂಪತಿಗಳು ರಥಕ್ಕೆ ಗಾಲಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಕೆಲ ಭಕ್ತರು ತಮ್ಮ ಹೆಸರಿನೊಂದಿಗೆ ದೇಣಿಗೆ ನೀಡಿದರೆ, ಇನ್ನೂ ಕೆಲವರು ಹೆಸರು ಬಹಿರಂಗಪಡಿಸದೇ ಕಾಣಿಕೆ ಸಲ್ಲಿಸುತ್ತಾರೆ. ದೇಣಿಗೆ ನೀಡುವ ವಿಚಾರದಲ್ಲಿ ಜಾತಿ ಅಥವಾ ಧರ್ಮದ ಆಧಾರದ ಮೇಲೆ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಇದೇ ವೇಳೆ ಆಶ್ರಮದ ಆಡಳಿತ ಹಾಗೂ ಹಣಕಾಸು ನಿರ್ವಹಣೆ ಕುರಿತು ಮಾತನಾಡಿದ ಕಲ್ಲಯ್ಯಜ್ಜನವರು, ತಾವು ಪೀಠಾಧಿಪತಿಯಾದ ಸಂದರ್ಭದಲ್ಲಿ ಆಶ್ರಮಕ್ಕೆ ಲಕ್ಷಾಂತರ ರೂಪಾಯಿ ಸಾಲವಿತ್ತು. ಅದನ್ನು ತೀರಿಸಿ ಆಶ್ರಮದ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಲಾಗಿದೆ. ಎಲ್ಲ ಆದಾಯ-ವೆಚ್ಚಗಳ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನಿರ್ವಹಿಸಲಾಗಿದೆ ಎಂದು ತಿಳಿಸಿದರು.
ಕೆಲ ಟ್ರಸ್ಟಿಗಳಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ ಅವರು, ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರು. ಹಲವು ವರ್ಷಗಳಿಂದ ಮಾನಸಿಕ ಕಿರುಕುಳ ನೀಡಲಾಗುತ್ತಿದ್ದು, ಈ ವಿಷಯವನ್ನು ಟ್ರಸ್ಟ್ ಸಮಿತಿ, ಭಕ್ತರು ಹಾಗೂ ಸಾರ್ವಜನಿಕರ ಗಮನಕ್ಕೆ ತರಲು ಸುದ್ದಿಗೋಷ್ಠಿ ನಡೆಸಲಾಗಿದೆ ಎಂದು ತಿಳಿಸಿದರು.
ವೀರೇಶ್ವರ ಪುಣ್ಯಾಶ್ರಮವು ಜಾತ್ಯಾತೀತ ಸಂಸ್ಥೆಯಾಗಿದ್ದು, ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪರಂಪರೆಯನ್ನು ಹೊಂದಿದೆ. ಪೀರಸಾಬ ಕೌತಾಳ ಅವರೊಂದಿಗೆ ಆಶ್ರಮಕ್ಕೆ ಗುರು-ಶಿಷ್ಯರ ಸಂಬಂಧವಿದ್ದು, ಅವರು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಗೆ ಆಶ್ರಮದಿಂದ ಯಾವುದೇ ಆರ್ಥಿಕ ನೆರವು ನೀಡಿಲ್ಲ. ಶಿಕ್ಷಣ ಸಂಸ್ಥೆಗಳು ಸುಗಮವಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದಲೇ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಆಶ್ರಮದ ವ್ಯವಸ್ಥಾಪಕ ಹೇಮರಾಜಶಾಸ್ತ್ರೀ, ಎಂ. ಕಲ್ಲಿನಾಥಶಾಸ್ತ್ರೀ, ವೀರೇಶ ಕಿತ್ತೂರು, ಎಂ.ಜಿ. ಗುರುಸಿದ್ದೇಶ್ವರಶಾಸ್ತ್ರೀ, ಚನ್ನಬಸಯ್ಯ ಬಂಕಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.
“ಭಕ್ತರ ದೇಣಿಗೆಗೆ ಜಾತಿ ಅಥವಾ ಧರ್ಮದ ಬಣ್ಣ ಹಚ್ಚುವುದು ಸರಿಯಲ್ಲ. ರಥೋತ್ಸವವನ್ನು ವಿವಾದದ ಕೇಂದ್ರವನ್ನಾಗಿಸದೇ ಭಕ್ತಿಭಾವದಿಂದ ನಡೆಸಬೇಕು.”
ಕಲ್ಲಯ್ಯಜ್ಜನವರು, ಪೀಠಾಧಿಪತಿ, ವೀರೇಶ್ವರ ಪುಣ್ಯಾಶ್ರಮ



