ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮರ್ಪಕ ಮಳೆಯಿಲ್ಲದೆ ರೈತರು ಆತಂಕದಲ್ಲಿರುವ ಹಿನ್ನೆಲೆಯಲ್ಲಿ ತಾಲೂಕಿನ ಶಿಗ್ಲಿ ಗ್ರಾಮದ ಗಣೇಶಪೇಟೆಯ ತಾಯಂದಿರು ಸಂಪ್ರದಾಯಬದ್ಧವಾಗಿ ಗುರ್ಜಿ ಹೊತ್ತು ಮಳೆ ದೇವರನ್ನು ಪ್ರಾರ್ಥಿಸುವ ಮೂಲಕ ಉತ್ತಮ ಮಳೆಯಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಮುಂಗಾರು ವಿಳಂಬವಾಗಿರುವುದರಿಂದ ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸುತ್ತಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಇದರಿಂದ ಕಂಗಾಲಾಗಿರುವ ರೈತ ಸಮುದಾಯದ ಸಂಕಷ್ಟ ನಿವಾರಣೆಯಾಗಲಿ ಎಂಬ ಆಶಯದೊಂದಿಗೆ ಗ್ರಾಮಸ್ಥರು ಈ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡರು.
ಗಣೇಶಪೇಟೆಯ ಮಹಿಳೆಯರು ಗುರ್ಜಿ ಹೊತ್ತು ಗ್ರಾಮದಲ್ಲಿ ಸಂಚರಿಸಿ, ಸಕಾಲಕ್ಕೆ ಮಳೆಯಾಗಿ ರೈತರ ಬದುಕು ಹಸನಾಗಲಿ, ಹೊಲ-ಗದ್ದೆಗಳು ಹಸಿರಿನಿಂದ ಕಂಗೊಳಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಗ್ರಾಮದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ನಡೆದ ಈ ಆಚರಣೆಯಲ್ಲಿ ಭಕ್ತಿ, ನಂಬಿಕೆ ಹಾಗೂ ಜನಪದ ಸಂಸ್ಕೃತಿಯ ಸೊಬಗು ಅನಾವರಣಗೊಂಡಿತು.
ಕಾರ್ಯಕ್ರಮದಲ್ಲಿ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿ, ಉತ್ತಮ ಮಳೆಯಾಗಿ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ರೈತರ ಸಂಕಷ್ಟ ದೂರವಾಗಲಿ ಎಂದು ಪ್ರಾರ್ಥಿಸಿದರು.
ಮಳೆಯ ಅಭಾವದಿಂದ ಸಂಕಷ್ಟದಲ್ಲಿರುವ ರೈತ ಕುಟುಂಬಗಳ ಮಹಿಳೆಯರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂತಹ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸುತ್ತಿರುವುದು ಕಂಡುಬರುತ್ತಿದ್ದು, ರೈತ ಸಮುದಾಯದ ಈ ಮೊರೆಗೆ ಮಳೆರಾಯ ಕರುಣೆ ತೋರಬೇಕೆಂಬ ಆಶಯ ವ್ಯಕ್ತವಾಗಿದೆ.



