ಬೆಂಗಳೂರು: ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆಯಲ್ಲಿ ಭಾರೀ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ತೋತಾಪುರಿ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರ ಮಹತ್ವದ ನೆರವು ಘೋಷಿಸಿದೆ. ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ ₹1,750 ಸಹಾಯಧನ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಕುರಿತು ಕೇಂದ್ರ ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ತೋತಾಪುರಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ಗಮನಿಸಿ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಾವು ಪತ್ರ ಬರೆದು ಬೆಲೆ ಕೊರತೆ ಪಾವತಿ ಯೋಜನೆ (PDPS) ಅಡಿಯಲ್ಲಿ ರೈತರಿಗೆ ನೆರವು ನೀಡುವಂತೆ ಮನವಿ ಮಾಡಿದ್ದೆ. ಆ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಇದೀಗ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ ರೈತರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಜೋಶಿ ತಿಳಿಸಿದ್ದಾರೆ.
ರಾಜ್ಯದ ಸಾವಿರಾರು ಮಾವು ಬೆಳೆಗಾರರಿಗೆ ಈ ನಿರ್ಧಾರ ಆರ್ಥಿಕ ಬಲ ತುಂಬಲಿದ್ದು, ಬೆಲೆ ಕುಸಿತದಿಂದ ಉಂಟಾಗಿರುವ ನಷ್ಟವನ್ನು ಭಾಗಶಃ ಸರಿದೂಗಿಸಲು ನೆರವಾಗಲಿದೆ. ವಿಶೇಷವಾಗಿ ತೋತಾಪುರಿ ಮಾವು ಉತ್ಪಾದಕರಿಗೆ ಇದು ದೊಡ್ಡ ಮಟ್ಟದ ಪರಿಹಾರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತ ನಿರ್ಧಾರ ಕೈಗೊಂಡಿರುವುದಕ್ಕೆ ಪ್ರಹ್ಲಾದ್ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ರೈತರ ಕಲ್ಯಾಣಕ್ಕೆ ನಿರಂತರ ಆದ್ಯತೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ರೈತರ ಪರವಾಗಿ ಧನ್ಯವಾದ ತಿಳಿಸಿದ್ದಾರೆ.
ರಾಜ್ಯದಲ್ಲಿ ಮಾವಿನ ಬೆಲೆ ಕುಸಿತ ಮತ್ತು ಮಾರುಕಟ್ಟೆ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಬೆಳೆಗಾರರಿಗೆ ಕೇಂದ್ರ ಸರ್ಕಾರದ ಈ ನಿರ್ಧಾರವು ಮಹತ್ವದ ಆರ್ಥಿಕ ಆಸರೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.



