ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ನೇರ ನಗದು ವರ್ಗಾವಣೆ (ಡಿಬಿಟಿ) ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಗಳು ರೈತ ವಿರೋಧಿಯಾಗಿದ್ದು, ಸರ್ಕಾರ ಕೂಡಲೇ ಈ ನೀತಿಗಳನ್ನು ಹಿಂಪಡೆಯಬೇಕು ಎಂದು ಸಿಐಟಿಯು ತಾಲೂಕು ಘಟಕ ಆಗ್ರಹಿಸಿದೆ.
ಪಟ್ಟಣದ ಕೆಪಿಟಿಸಿಎಲ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ತಾಲೂಕು ಮುಖ್ಯಸ್ಥ ಜಗನ್ನಾಥ, ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ಮೂಲಕ ಸರ್ಕಾರ ರೈತರು ಹಾಗೂ ವಿದ್ಯುತ್ ನೌಕರರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ ಹಾಗೂ ಸೌಲಭ್ಯಗಳ ಕೊರತೆ ಇದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ರೈತರ ಹಿತಕ್ಕೂ ಧಕ್ಕೆ ಉಂಟಾಗಲಿದ್ದು, ಮುಂದಿನ ದಿನಗಳಲ್ಲಿ ರೈತರ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಜೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಸೇರಿದಂತೆ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಬದಲು ವಿದ್ಯುತ್ ನೌಕರರ ಹಾಗೂ ರಾಜ್ಯದ 40 ಲಕ್ಷಕ್ಕೂ ಹೆಚ್ಚು ಪಂಪ್ಸೆಟ್ ಹೊಂದಿರುವ ರೈತರ ಹಿತವನ್ನು ಕಾಪಾಡಬೇಕು. ಇಲ್ಲದಿದ್ದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬಳಿಕ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಮನವಿಯನ್ನು ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ್ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡ ಆರ್.ಎಸ್. ಬಸವರಾಜ್, ಕೆಇಬಿ ನೌಕರರು ಹಾಗೂ ಸಿಐಟಿಯು ಪದಾಧಿಕಾರಿಗಳು ಉಪಸ್ಥಿತರಿದ್ದರು.



