ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಗದಗ ಶಹರ ವಲಯದ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಾಲಾ ವಾಹನಗಳ ಚಾಲಕರು ಮತ್ತು ನಿರ್ವಾಹಕರ ಸಭೆ ನಗರದ ಶಹರ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು.
ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಅರುಣಕುಮಾರ ಕಟ್ಟಿಮನಿ ಮಾತನಾಡಿ, ಶಾಲಾ ವಾಹನಗಳ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಶಾಲಾ ವಾಹನ ಚಾಲಕರು ಅತಿ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಓವರ್‌ಟೇಕ್ ಮಾಡುವಾಗ ಅಥವಾ ಇತರ ವಾಹನಗಳನ್ನು ಹಿಂದಿಕ್ಕುವ ವೇಳೆ ಯಾವುದೇ ರೀತಿಯ ಅಜಾಗರೂಕತೆ ತೋರಬಾರದು. ಮಕ್ಕಳ ಸುರಕ್ಷತೆಯನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ನಿಯಮಬದ್ಧವಾಗಿ ವಾಹನ ಚಲಾಯಿಸಬೇಕು ಎಂದು ಸೂಚಿಸಿದರು.
ವಾಹನಗಳಲ್ಲಿ ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಬಾರದು. ಶಾಲಾ ವಾಹನದ ವೇಗವನ್ನು ಗಂಟೆಗೆ 40 ಕಿ.ಮೀ. ಮಿತಿಯೊಳಗೆ ಕಾಯ್ದುಕೊಳ್ಳಬೇಕು. ವಾಹನಗಳ ಫಿಟ್ನೆಸ್ ಪ್ರಮಾಣಪತ್ರ, ವಿಮೆ ಹಾಗೂ ಇತರೆ ದಾಖಲೆಗಳನ್ನು ನಿಯಮಿತವಾಗಿ ನವೀಕರಿಸಿಕೊಂಡಿರಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಮಾತನಾಡಿ, ಶಾಲಾ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಕಡ್ಡಾಯವಾಗಿದ್ದು, ಅಗ್ನಿಶಾಮಕ ಉಪಕರಣ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿ ಇರಬೇಕು ಎಂದು ಹೇಳಿದರು. ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ನಿರಂತರ ತರಬೇತಿ ಮತ್ತು ಅರಿವು ಮೂಡಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಚಾಲಕರು ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ವಾಹನ ಚಾಲನೆಯ ವೇಳೆ ಮೊಬೈಲ್ ಫೋನ್ ಬಳಕೆ ಮಾಡಬಾರದು. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಅಜಾಗರೂಕ ಚಾಲನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ವಾಹನಗಳ ತಾಂತ್ರಿಕ ಸ್ಥಿತಿ, ಬ್ರೇಕ್ ವ್ಯವಸ್ಥೆ, ಟೈರ್‌ಗಳ ಗುಣಮಟ್ಟ ಸೇರಿದಂತೆ ವಿವಿಧ ಸುರಕ್ಷತಾ ಅಂಶಗಳ ಕುರಿತು ಪರಿಶೀಲನೆ ನಡೆಸಲಾಯಿತು. ಸರ್ಕಾರ ಹಾಗೂ ಸಾರಿಗೆ ಇಲಾಖೆ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಎಸ್.ಸಿ. ಪ್ರಭಯ್ಯನಮಠ, ಎಸ್.ಆರ್. ನದಾಫ್, ಎಂ.ಎ. ಯರಗುಡಿ, ಮುರಳಿ ಸೋಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಗದಗ ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು, ಶಾಲಾ ವಾಹನ ಚಾಲಕರು ಹಾಗೂ ನಿರ್ವಾಹಕರು ಭಾಗವಹಿಸಿದ್ದರು.
“ಶಾಲಾ ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ. ವೇಗ ಮಿತಿ, ಜಿಪಿಎಸ್, ಫಸ್ಟ್ ಎಯ್ಡ್ ಕಿಟ್ ಸೇರಿದಂತೆ ಎಲ್ಲ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಅನಿವಾರ್ಯ.”
ಅರುಣಕುಮಾರ ಕಟ್ಟಿಮನಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ



