Home Mangalore ‘ಡಿಕೆಶಿ ಜೊತೆ ಬಿಸಿನೆಸ್, ಅಡ್ಡ ಮತದಾನ ಆರೋಪ ಎಲ್ಲವೂ ಸುಳ್ಳು’: ಧರ್ಮಸ್ಥಳದಲ್ಲಿ ಬಿ.ವೈ. ವಿಜಯೇಂದ್ರ ಸ್ಪಷ್ಟನೆ

‘ಡಿಕೆಶಿ ಜೊತೆ ಬಿಸಿನೆಸ್, ಅಡ್ಡ ಮತದಾನ ಆರೋಪ ಎಲ್ಲವೂ ಸುಳ್ಳು’: ಧರ್ಮಸ್ಥಳದಲ್ಲಿ ಬಿ.ವೈ. ವಿಜಯೇಂದ್ರ ಸ್ಪಷ್ಟನೆ

0
‘ಡಿಕೆಶಿ ಜೊತೆ ಬಿಸಿನೆಸ್, ಅಡ್ಡ ಮತದಾನ ಆರೋಪ ಎಲ್ಲವೂ ಸುಳ್ಳು’: ಧರ್ಮಸ್ಥಳದಲ್ಲಿ ಬಿ.ವೈ. ವಿಜಯೇಂದ್ರ ಸ್ಪಷ್ಟನೆ
Spread the love

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಾಜಕೀಯ ಮತ್ತು ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಧರ್ಮಸ್ಥಳದಲ್ಲಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನ ಪ್ರಕರಣದಲ್ಲೂ ತಮ್ಮ ವಿರುದ್ಧ ನಡೆದಿರುವ ಅಪಪ್ರಚಾರಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲೇ ಉತ್ತರ ನೀಡಿದ್ದಾರೆ.

ಧರ್ಮಸ್ಥಳದ ಸನ್ನಿಧಿ ಗೆಸ್ಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ಧರ್ಮಸ್ಥಳಕ್ಕೆ ತಾವು ಕೇವಲ ದರ್ಶನಕ್ಕಾಗಿ ಬಂದಿದ್ದು, ಯಾವುದೇ ಆಣೆ-ಪ್ರಮಾಣ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿದರು. ಪಕ್ಷದ ಹಿರಿಯರ ಸಲಹೆಯಂತೆ ಈ ವಿಚಾರವನ್ನು ಪಕ್ಷದೊಳಗೇ ಬಗೆಹರಿಸಿಕೊಳ್ಳುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಅಡ್ಡ ಮತದಾನದ ಘಟನೆ ತಮಗೂ ಹಾಗೂ ಪಕ್ಷದ ಕಾರ್ಯಕರ್ತರಿಗೂ ಆಘಾತ ತಂದಿದೆ. ಸತ್ಯ ಹೊರಬರಬೇಕು ಎಂಬ ಕಾರಣಕ್ಕೆ ಈ ಹಿಂದೆ ಆಣೆ-ಪ್ರಮಾಣದ ಬಗ್ಗೆ ಮಾತನಾಡಿದ್ದೆ. ಆದರೆ ಈಗ ಆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ರಾಜಕೀಯ ಅಥವಾ ವ್ಯಾವಹಾರಿಕ ಸಂಬಂಧ ಇಲ್ಲ. ಸಿಎಂ ಪರವಾಗಿ ಅಡ್ಡ ಮತದಾನಕ್ಕೆ ಸಹಕರಿಸಿದ್ದೇನೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು. ಮುಖ್ಯಮಂತ್ರಿಯಾಗಿರುವ ಕಾರಣ ಅವರಿಗೆ ನೀಡಬೇಕಾದ ಸಾಂಸ್ಥಿಕ ಗೌರವವನ್ನಷ್ಟೇ ನೀಡಿದ್ದೇನೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಓರ್ವ ಸಂಸದ, ಎಂಟು ಶಾಸಕರು ಹಾಗೂ ಇಬ್ಬರು ಎಂಎಲ್‌ಸಿಗಳು ಉಪಸ್ಥಿತರಿದ್ದರು. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದವರಿಗೂ ದೇವರು ಒಳ್ಳೆಯದು ಮಾಡಲಿ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.


Spread the love

LEAVE A REPLY

Please enter your comment!
Please enter your name here