ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು ತಣ್ಣಗಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರವು ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಯ ಎಲ್‌ಪಿಜಿ (LPG) ಗ್ರಾಹಕರಿಗೆ ಮಹತ್ವದ ರಿಲೀಫ್ ನೀಡಿದೆ.
ಹೋಟೆಲ್, ರೆಸ್ಟೋರೆಂಟ್ ಹಾಗೂ ಫ್ಯಾಕ್ಟರಿಗಳಿಗೆ ನೀಡಲಾಗುತ್ತಿದ್ದ ವಾಣಿಜ್ಯ ಸಿಲಿಂಡರ್ ಪೂರೈಕೆ ಮೇಲಿದ್ದ ಎಲ್ಲ ವಲಯವಾರು ನಿಯಂತ್ರಣ ಹಾಗೂ ಕೋಟಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ರದ್ದುಗೊಳಿಸಿದೆ.
ದೇಶೀಯವಾಗಿ ಗ್ಯಾಸ್ ಉತ್ಪಾದನೆ ಹಾಗೂ ಪೂರೈಕೆ ಸ್ಥಿತಿ ಸುಧಾರಿಸಿರುವುದರಿಂದ ಪರಿಸ್ಥಿತಿಯನ್ನು ಯುದ್ಧಪೂರ್ವ ಸ್ಥಿತಿಗೆ ಮರುಸ್ಥಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಿರ್ಧಾರದಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಲಭ್ಯತೆ ಸುಲಭವಾಗುವ ನಿರೀಕ್ಷೆಯಿದೆ. ಆದರೆ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ನಿರ್ಧಾರವನ್ನು ಹೋಟೆಲ್ ಸಂಘ ಸ್ವಾಗತಿಸಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಕ್ಕೆ ಇದು ದೊಡ್ಡ ರಿಲೀಫ್ ಆಗಲಿದೆ ಎಂದು ಅಭಿಪ್ರಾಯಪಟ್ಟಿದೆ.



