ರಾಯಚೂರು: ಮಸ್ಕಿ ತಾಲೂಕಿನ ಮೆದಿಕಿನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳೊಂದಿಗೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಾಗರಬೆಂಚಿ ಗ್ರಾಮದ 29 ವರ್ಷದ ವೀರನಗೌಡ ಪಾಟೀಲ್ ಮೃತ ಶಿಕ್ಷಕರಾಗಿದ್ದಾರೆ. ಮಧ್ಯಾಹ್ನ ಊಟದ ನಂತರ ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ನೆಲಕ್ಕುರುಳಿದ್ದಾರೆ.
ಸಹ ಶಿಕ್ಷಕರು ಹಾಗೂ ಸ್ಥಳೀಯರು ತಕ್ಷಣ ಅವರನ್ನು ಮಸ್ಕಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಯುವ ವಯಸ್ಸಿನಲ್ಲೇ ಶಿಕ್ಷಕರ ಅಕಾಲಿಕ ನಿಧನ ಶಾಲೆಯ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಮತ್ತು ಆತಂಕ ಮೂಡಿಸಿದೆ.



