ಹಗರಿಬೊಮ್ಮನಹಳ್ಳಿ: ಸರ್ಕಾರಿ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳಿಗೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಬೋಧನೆಗೆ ನಿಯೋಜಿಸುವ ರಾಜ್ಯ ಸರ್ಕಾರದ ಕರಡು ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ನೂತನ ಜಿಲ್ಲಾಧ್ಯಕ್ಷ ಗೂಳಪ್ಪ ಹುಲಿಮನಿ ಆಗ್ರಹಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಪ್ರಾಚಾರ್ಯರು ಹಾಗೂ ಸರ್ಕಾರಿ-ಅನುದಾನಿತ ಕಾಲೇಜುಗಳ ಉಪನ್ಯಾಸಕರು ಪತ್ರ ಚಳುವಳಿ ನಡೆಸಿ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಹೊಸ ಕರಡು ನಿಯಮಗಳ ಪ್ರಕಾರ ಪಿಯು ಉಪನ್ಯಾಸಕರನ್ನು ನೇರ ನೇಮಕಾತಿ ಅಥವಾ ಬಡ್ತಿಯ ಮೂಲಕ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳಿಗೆ ಬೋಧನೆಗೆ ಕಡ್ಡಾಯವಾಗಿ ನಿಯೋಜಿಸುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಪಿಯು ಉಪನ್ಯಾಸಕರು ಗ್ರೂಪ್–‘ಬಿ’ ಹಾಗೂ ಪ್ರೌಢಶಾಲಾ ಶಿಕ್ಷಕರು ಗ್ರೂಪ್–‘ಸಿ’ ವೃಂದಕ್ಕೆ ಸೇರಿದವರಾಗಿದ್ದು, ಇಬ್ಬರಿಗೂ ಪ್ರತ್ಯೇಕ ನೇಮಕಾತಿ ಹಾಗೂ ಸೇವಾ ನಿಯಮಗಳಿವೆ. ಇಂತಹ ಸಂದರ್ಭದಲ್ಲಿ ಪಿಯು ಉಪನ್ಯಾಸಕರಿಗೆ ಹೆಚ್ಚುವರಿ ಹೈಸ್ಕೂಲ್ ಬೋಧನೆ ಜವಾಬ್ದಾರಿ ನೀಡುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಥಮ ಮತ್ತು ದ್ವಿತೀಯ ಪಿಯುಸಿ ಹಂತವು ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪ್ರಮುಖವಾಗಿದ್ದು, ಉಪನ್ಯಾಸಕರ ಸಂಪೂರ್ಣ ಸಮಯ ಅಗತ್ಯವಿದೆ. 9 ಮತ್ತು 10ನೇ ತರಗತಿಗಳಿಗೆ ಅವರನ್ನು ನಿಯೋಜಿಸಿದರೆ ಪಿಯು ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಯಿತು.
ಈ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು ಹಾಗೂ ಪಿಯು ಉಪನ್ಯಾಸಕರನ್ನು ಕೇವಲ ಪಿಯು ತರಗತಿಗಳ ಬೋಧನೆಗೆ ಮಾತ್ರ ಬಳಸಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎಂ.ಕೆ. ದುರುಗಪ್ಪ, ಬೇಟೆ ಮಾರುತಿ, ಎನ್. ಸಾಬುದ್ದೀನ್ ಸಾಹೇಬ್, ಟಿ. ಮಲ್ಲಿಕಾರ್ಜುನ, ಎಸ್. ಮಹೇಶ್, ಬಿ.ಜೆ. ರಾಘವೇಂದ್ರ, ಬಿ. ಚಿರಂಜೀವಿ ಆಚಾರಿ, ಜೆ.ಬಿ. ನಾಗರಾಜ, ವಿಶ್ವನಾಥ್, ಬಸವರಾಜ್, ಸಿದ್ದಪ್ಪ, ನಿತಿನ್, ಗುರು ಬಸವರಾಜ, ಉಮಾ, ಅನ್ನಪೂರ್ಣ ಸೇರಿದಂತೆ ಹಲವು ಉಪನ್ಯಾಸಕರು ಉಪಸ್ಥಿತರಿದ್ದರು.



