ರಿಯಾಧ್: ಸೌದಿ ಅರೇಬಿಯಾದ ರಾಸ್ ತನೂರಾ ನಗರದಲ್ಲಿ ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಭೀಕರ ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ.
ಭಾನುವಾರ ನಡೆದ ಈ ದುರಂತದಲ್ಲಿ ಹೆಲಿಕಾಪ್ಟರ್ ಸಂಪೂರ್ಣವಾಗಿ ಪತನಗೊಂಡಿದ್ದು, ಎಲ್ಲರೂ ಸೌದಿ ನಾಗರಿಕರೇ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಮೃತರ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಅಪಘಾತದ ನಿಖರ ಸಮಯ ಮತ್ತು ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಹಾಗೂ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.
ಸೌದಿ ಇಂಧನ ಸಚಿವಾಲಯ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ.
ರಾಸ್ ತನೂರಾ ಪ್ರದೇಶವು ಸೌದಿ ಅರಾಮ್ಕೊ ಸಂಸ್ಥೆಯ ಪ್ರಮುಖ ತೈಲ ಕಾರ್ಯಾಚರಣೆ ಕೇಂದ್ರವಾಗಿದ್ದು, ವಿಶ್ವದ ಪ್ರಮುಖ ತೈಲ ರಫ್ತು ಟರ್ಮಿನಲ್‌ಗಳಲ್ಲಿ ಒಂದಾಗಿದೆ.



