• 25 ಲಕ್ಷ ರೂ. ಪರಿಹಾರ ಘೋಷಿಸುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ್ ಸರ್ಕಾರಕ್ಕೆ ಒತ್ತಾಯ
ವಿಜಯಸಾಕ್ಷಿ ಸುದ್ದಿ, ಗದಗ:
ಅಲ್ಲ್ಯಾರೋ ಸತ್ತರೆ 25 ಲಕ್ಷ ರೂ. ಪರಿಹಾರ ಘೋಷಿಸುವ ಸರ್ಕಾರ, ಹಕ್ಕಿಗಾಗಿ ಹೋರಾಡಿ ಮೃತಪಟ್ಟ ಮಹಿಳೆ ಪರಿಶಿಷ್ಟ ಪಂಗಡ ಜನಾಂಗಕ್ಕೆ ಸೇರಿದವಳೆಂದು ಕೇವಲ 5 ಲಕ್ಷ ರೂ. ಘೋಷಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ್ ಕಿಡಿಕಾರಿದರು.

ಮಂಗಳವಾರ ಜಿಮ್ಸ್ ಆವರಣದಲ್ಲಿರುವ ಸರ್ಕಾರಿ ಶುಶ್ರೂಷಾ ಶಾಲೆಯ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಮೃತ ಮಹಿಳೆ ಎಸ್ಟಿ ಜನಾಂಗಕ್ಕೆ ಸೇರಿದವರಾಗಿದ್ದು, ಎಷ್ಟು ಪರಿಹಾರ ಕೊಟ್ಟರೂ ತೆಗೆದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಐದು ಲಕ್ಷ ರೂ. ಘೋಷಿಸಿರುವುದು ಖಂಡನೀಯ. ಕೊಡುವುದಾದರೆ 25 ಲಕ್ಷ ರೂ. ಪರಿಹಾರ ಕೊಡಿ. ಇಲ್ಲದಿದ್ದರೆ, ಅದು ಸಹಿತ ಬೇಡ. ನಾವೇ ಅಷ್ಟು ಪರಿಹಾರ ಕೊಡುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖಾಧಿಕಾರಿಗಳು ಗ್ರಾಮದ ರೈತರನ್ನು ರಕ್ಷಿಸಲು ಹೋಗದೆ, ಬಂಧಿಸಿಲು ಹೋಗಿದ್ದರು. ಗ್ರಾಮದ ಕೆಲವರ ಮೇಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಅವರು ಎಲ್ಲಿಯೂ ಹೊಗದೆ ಇಲ್ಲಿಯೇ ಇದ್ದಾರೆ ಯಾವ ಗಂಡಸು ಬಂಧಿಸಲಿಕ್ಕೆ ಬರುತ್ತಾನೋ ನೋಡೋಣ. ಅವರನ್ನು ಅರೆಸ್ಟ್ ಮಾಡಿದ್ರೆ ಅವರ ಜೊತೆ ನಾನು ಹೋಗುತ್ತೇನೆ ಎಂದು ಜಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದರು.
ಸ್ಥಳೀಯ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದದ್ದು ಎಂದು ಆರೋಪಿಸಿದ ಜಿ.ಎಸ್.ಪಾಟೀಲರು ಸರ್ಕಾರ ಅರಣ್ಯ ಅಧಿಕಾರಿಗಳ ಗರ್ವ ಅಡಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.