ವಿಜಯಸಾಕ್ಷಿ ಸುದ್ದಿ, ಗದಗ: ಕೋವಿಡ್ನಂತಹ ಸಂಕಷ್ಟದ ಸಂದರ್ಭಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಜನರ ಆರೋಗ್ಯ ರಕ್ಷಣೆಗೆ ಶ್ರಮಿಸಿದ ವೈದ್ಯರ ಸೇವೆ ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹೇಳಿದರು.
ನಗರದ ಕೆಎಚ್ಪಿಐಎಂಎಸ್ ಉಪನ್ಯಾಸ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗದಗ ಶಾಖೆ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಮಾನವೀಯ ಸೇವೆಯ ಪ್ರತೀಕವಾಗಿದೆ. ಸಮಾಜದ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಂದು ಸಂಕಷ್ಟದ ಘಟ್ಟದಲ್ಲೂ ವೈದ್ಯ ಸಮುದಾಯ ನಿಸ್ವಾರ್ಥ ಸೇವೆ ಸಲ್ಲಿಸಿದೆ. ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಐಎಂಎ ಗದಗ ಶಾಖೆ ಕೈಗೊಂಡಿರುವ ಸಾಮಾಜಿಕ ಹಾಗೂ ವೈದ್ಯಕೀಯ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎಂಎ ಗದಗ ಶಾಖೆಯ ಅಧ್ಯಕ್ಷ ಡಾ. ಶ್ರೀಧರ ವಿ. ಕುರಡಗಿ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿ ನೈತಿಕ ಮೌಲ್ಯಗಳನ್ನು ಕಾಪಾಡುವ ಜತೆಗೆ ಅನಧಿಕೃತ ವೈದ್ಯಕೀಯ (ಕ್ವಾಕ್ ಪ್ರಾಕ್ಟೀಸ್) ವಿರುದ್ಧ ವೈದ್ಯರು ಸಂಘಟಿತವಾಗಿ ಹೋರಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕೆಎಚ್ಪಿಐಎಂಎಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ರಾಷ್ಟ್ರೀಯ ವೈದ್ಯರ ದಿನಾಚರಣೆಯ ಮಹತ್ವವನ್ನು ವಿವರಿಸಿ, ಡಾ. ಬಿ.ಸಿ. ರಾಯ್ ಅವರ ಆದರ್ಶ ಸೇವೆ ಪ್ರತಿಯೊಬ್ಬ ವೈದ್ಯರಿಗೂ ಸ್ಫೂರ್ತಿಯಾಗಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಪ್ರಕಾಶ್ ಎಸ್. ನೀಲಗುಂದ, ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಐಎಂಎ ಗದಗ ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಎಸ್.ಆರ್. ನಾಗನೂರ, ಕಾರ್ಯದರ್ಶಿ ಡಾ. ರಾಹುಲ್ ಶಿರೋಳ, ಖಜಾಂಚಿ ಡಾ. ಜಯರಾಜ ಪಾಟೀಲ, ಐಎಂಎ ಲೇಡೀಸ್ ವಿಂಗ್ ಅಧ್ಯಕ್ಷೆ ಡಾ. ಸುನಿತಾ ಎಸ್. ಕುರಡಗಿ, ಖಜಾಂಚಿ ಡಾ. ಜ್ಯೋತಿ ಪಾಟೀಲ ಸೇರಿದಂತೆ ಜಿಲ್ಲೆಯ ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರು ಉಪಸ್ಥಿತರಿದ್ದರು.
“ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ; ಅದು ಮಾನವೀಯ ಸೇವೆಯ ಪ್ರತೀಕ. ಕೋವಿಡ್ನಂತಹ ಸಂಕಷ್ಟದ ಕಾಲದಲ್ಲಿ ವೈದ್ಯರು ಸಲ್ಲಿಸಿದ ನಿಸ್ವಾರ್ಥ ಸೇವೆ ಸಮಾಜ ಎಂದಿಗೂ ಮರೆಯುವುದಿಲ್ಲ.”
ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ



