HomeGadag Newsಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ನಾಶ ಮನುಷ್ಯ ಧರ್ಮವಲ್ಲ: ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ನಾಶ ಮನುಷ್ಯ ಧರ್ಮವಲ್ಲ: ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮವಲ್ಲ, ನಮ್ಮ ಸುತ್ತಲಿನ ಪರಿಸರ ಹಾಗೂ ಸಮಾಜದೊಂದಿಗೆ ಸಾಮರಸ್ಯದಿಂದ ಬದುಕುವ ಜೀವನ ಪದ್ಧತಿಯಾಗಿದೆ. ದೇವರು ಸೃಷ್ಟಿಸಿದ ಪ್ರಕೃತಿಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಹಾಳು ಮಾಡುವುದು ಮನುಷ್ಯ ಧರ್ಮವಲ್ಲ ಎಂದು ಹಾಲಕೇರಿ ಅನ್ನದಾನೀಶ್ವರ ಸಂಸ್ಥಾನಮಠದ ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

ನಗರದ ರಾಜೀವಗಾಂಧಿ ನಗರದ ಈಶ್ವರ ಬಡಾವಣೆಯ ಈಶ್ವರ ಸಭಾಭವನದಲ್ಲಿ ಈಶ್ವರ ಸೇವಾ ಟ್ರಸ್ಟ್, ಗದಗ-ಬೆಟಗೇರಿ ನಗರಸಭೆ, ಕೆ.ಎಚ್. ಪಾಟೀಲ ಕಲಾ ವಿಜ್ಞಾನ ಕೇಂದ್ರ, ಪತಂಜಲಿ ಜಿಲ್ಲಾ ಯೋಗ ಸಮಿತಿ, ಧರ್ಮಸ್ಥಳ ಸಂಸ್ಥೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ಆಶ್ರಯದಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಯೋಗ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜೂನ್ 21ರಂದು ಯೋಗ ದಿನ ಆಚರಿಸುವ ಮಹತ್ವವನ್ನು ವಿವರಿಸಿದ ಶ್ರೀಗಳು, ಮನುಷ್ಯನು ದಿನಕ್ಕೆ ಸರಾಸರಿ 21,600 ಬಾರಿ ಉಸಿರಾಡುತ್ತಾನೆ. ಜೂನ್ 21 ಈ ಉಸಿರಾಟದ ಸಂಕೇತವಾಗಿದೆ ಎಂದು ಹೇಳಿದರು. ಯೋಗಾಭ್ಯಾಸವನ್ನು ಗುರುಗಳ ಮಾರ್ಗದರ್ಶನದಲ್ಲಿ ಮಾತ್ರ ಮಾಡಬೇಕು. ಟಿವಿ ಅಥವಾ ಮೊಬೈಲ್ ನೋಡಿ ಯೋಗ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಯೋಗವು ಭಾರತೀಯ ಋಷಿಮುನಿಗಳ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು. 2014ರಲ್ಲಿ ವಿಶ್ವಸಂಸ್ಥೆಯಲ್ಲಿ ಮೋದಿ ಅವರು ಯೋಗದ ಮಹತ್ವ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಇಂದು ವಿಶ್ವದಾದ್ಯಂತ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಪರಿಸರ ಹಾನಿ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ವಾಯು, ನೀರು ಮತ್ತು ಭೂಮಿಯ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪ್ರಕೃತಿ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ ಆರ್ಯ, ಜಿಲ್ಲಾ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಕೆಎಸ್‌ಎಸ್ ಸಮಿತಿ ಕಾರ್ಯದರ್ಶಿ ರವಿ ದಂಡಿನ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ, ಜಿಲ್ಲಾ ಆಯುಷ್ ಅಧಿಕಾರಿ ಜುಬೇದಾ ತಿಗಳೇರ ಯೋಗ ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಜಿ. ಸಂತೋಜಿ ವಹಿಸಿದ್ದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಯೋಗಾಭ್ಯಾಸಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

“ಯೋಗವಿರಲಿ, ಜೀವನವಿರಲಿ – ಕ್ರಮ ಮತ್ತು ಶಿಸ್ತು ಅತ್ಯಗತ್ಯ. ಗುರುಗಳ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದಾಗ ಮಾತ್ರ ಯೋಗದ ನಿಜವಾದ ಫಲ ದೊರೆಯುತ್ತದೆ.”

– ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಹಾಲಕೇರಿ ಅನ್ನದಾನೀಶ್ವರ ಸಂಸ್ಥಾನಮಠ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img