ವಿಜಯಸಾಕ್ಷಿ ಸುದ್ದಿ, ಗದಗ: ಮಧುಮೇಹಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ಅದನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಜೀವನಶೈಲಿಯಲ್ಲಿ ಬದಲಾವಣೆ, ರೋಗಿಗಳ ಶಿಕ್ಷಣ ಹಾಗೂ ಸೂಕ್ತ ಚಿಕಿತ್ಸೆಯ ಮೂಲಕ ಮೂತ್ರಪಿಂಡ ವೈಫಲ್ಯ, ಹೃದಯಾಘಾತ ಮತ್ತು ದೃಷ್ಟಿಹೀನತೆಯಂತಹ ಗಂಭೀರ ತೊಂದರೆಗಳನ್ನು ತಡೆಗಟ್ಟುವುದೇ ವೈದ್ಯಕೀಯ ಕ್ಷೇತ್ರದ ನಿಜವಾದ ಯಶಸ್ಸು ಎಂದು ಸಿಎಂಸಿ ವೆಲ್ಲೂರಿನ ಎಂಡೋಕ್ರಿನಾಲಜಿಸ್ಟ್ ಡಾ. ನಿಹಾಲ್ ಥಾಮಸ್ ಹೇಳಿದರು.
ಸಿಎಂಸಿ ವೆಲ್ಲೂರು, ಬಾಸೆಲ್ ಮಿಷನ್ ಸಿಎಸ್ಐ ಆಸ್ಪತ್ರೆ ಹಾಗೂ ಗದಗ ಐಎಂಎ ಸಹಯೋಗದಲ್ಲಿ ನಗರದ ಕ್ಲಾರ್ಕ್ಸ್ ಇನ್ ಹೋಟೆಲ್ನಲ್ಲಿ ಭಾನುವಾರ ಆಯೋಜಿಸಿದ್ದ ಮಧುಮೇಹ ಮತ್ತು ಎಂಡೋಕ್ರಿನಾಲಜಿ ಕುರಿತ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.
ಮಧುಮೇಹವು ಕೇವಲ ಸಕ್ಕರೆ ಕಾಯಿಲೆಯಲ್ಲ, ಅದು ಚಯಾಪಚಯ ಸಿಂಡ್ರೋಮ್ನ ಪ್ರಮುಖ ಭಾಗವಾಗಿದೆ. ನಿರಂತರ ಗ್ಲೂಕೋಸ್ ಮಾನಿಟರಿಂಗ್ (CGM), ವೈಯಕ್ತಿಕ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಆಧುನಿಕ ಔಷಧೋಪಚಾರಗಳಿಂದ ಮಧುಮೇಹದ ಗಂಭೀರ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ವಿವರಿಸಿದರು.
ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿರುವ ಟೈಪ್–5 ಮಧುಮೇಹ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಥಾಮಸ್, ದೇಹದ ತೂಕ ಕಡಿಮೆ ಇರುವ ಯುವಜನರಲ್ಲಿ ಕಂಡುಬರುವ ಈ ಹೊಸ ಮಾದರಿಯ ಮಧುಮೇಹದ ಕುರಿತು ಸಿಎಂಸಿ ವೆಲ್ಲೂರಿನ ಸಂಶೋಧನೆ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು.
ಡಾ. ಎಂ.ಡಿ. ಅನ್ವರ್ ಹುಸೇನ್ ಅವರು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹದ ಕುರಿತು ಉಪನ್ಯಾಸ ನೀಡಿ, ಗರ್ಭಿಣಿಯರಲ್ಲಿ ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ, ಸಮತೋಲನ ಆಹಾರ, ವ್ಯಾಯಾಮ ಹಾಗೂ ಅಗತ್ಯವಿದ್ದರೆ ಇನ್ಸುಲಿನ್ ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು.
ಮಧುಮೇಹಿಗಳಲ್ಲಿ ಪಾದದ ಹುಣ್ಣು ಹಾಗೂ ಅಂಗಚ್ಛೇದನದಂತಹ ಗಂಭೀರ ಸಮಸ್ಯೆಗಳನ್ನು ತಪ್ಪಿಸಲು ಆರಂಭಿಕ ತಪಾಸಣೆ, ಅಪಾಯದ ಮೌಲ್ಯಮಾಪನ, ಸೂಕ್ತ ಪಾದದ ಆರೈಕೆ ಹಾಗೂ ವಿಶೇಷ ಪಾದರಕ್ಷೆಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.
ಬಾಸೆಲ್ ಮಿಷನ್ ಸಿಎಸ್ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಜಯ್ ಚೈತನ್ಯ ರಾಜು ಸ್ವಾಗತಿಸಿ, ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ವೈದ್ಯರಿಗೆ ಇತ್ತೀಚಿನ ವೈದ್ಯಕೀಯ ಜ್ಞಾನವನ್ನು ತಲುಪಿಸುವ ಮೂಲಕ ಉತ್ತರ ಕರ್ನಾಟಕದ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನೆರವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ತಜ್ಞ ವೈದ್ಯರೊಂದಿಗೆ ಸಂವಾದ ನಡೆಸಿದರು. ಡಾ. ಸರ್ವೇಶ್ ಕಾಖಂಡಕಿ, ಡಾ. ಸಂಜೀವ ಜೋಷಿ ಹಾಗೂ ಡಾ. ಶಿಲ್ಪಾ ಧಡೂತಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಸಾಮ್ಯುಲ್ ವೆಸ್ಲೆ ನಿರೂಪಿಸಿ ವಂದಿಸಿದರು.
ಹಿರಿಯ ವೈದ್ಯರಾದ ಡಾ. ಕುಶಾಲ್ ಗೋಡಖಿಂಡಿ, ಡಾ. ಜೆ.ಕೆ. ಲಖಾನಿ, ಡಾ. ಸೊಲೊಮನ್, ಡಾ. ಶಶಿಧರ ರೇಶ್ಮೆ, ಡಾ. ಆರ್.ಎನ್. ಗೋಡಬೋಲೆ, ಡಾ. ಸವಿತಾ ರಾಜು ಸೇರಿದಂತೆ ಅನೇಕ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
“ಮಧುಮೇಹದ ಚಿಕಿತ್ಸೆ ಎಂದರೆ ಕೇವಲ ರಕ್ತದಲ್ಲಿನ ಸಕ್ಕರೆ ನಿಯಂತ್ರಣವಲ್ಲ; ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ, ಜೀವನಶೈಲಿಯಲ್ಲಿ ಬದಲಾವಣೆ ಮೂಲಕ ಹೃದಯ, ಮೂತ್ರಪಿಂಡ ಹಾಗೂ ಕಣ್ಣಿನ ಗಂಭೀರ ತೊಂದರೆಗಳನ್ನು ತಡೆಗಟ್ಟುವುದೇ ನಿಜವಾದ ಯಶಸ್ಸು.”
ಡಾ. ನಿಹಾಲ್ ಥಾಮಸ್, ಎಂಡೋಕ್ರಿನಾಲಜಿಸ್ಟ್, ಸಿಎಂಸಿ ವೆಲ್ಲೂರು



