ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ಸಾಹಿತಿ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಹಾಗೂ ನಿರಂತರ ಪ್ರಕಾಶನದ ಸಂಚಾಲಕರಾದ ಎ.ಎಸ್. ಮಕಾನದಾರ ಅವರು 2024ನೇ ಸಾಲಿನ ರಾಜ್ಯ ಮಟ್ಟದ ಕನಕ–ಷರೀಫ್ ಕಾವ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಈ ಕುರಿತು ಆಯ್ಕೆ ಸಮಿತಿಯ ಅಧ್ಯಕ್ಷರಾದ ಹಿರಿಯ ಬಂಡಾಯ ಸಾಹಿತಿ ಡಾ. ಸತೀಶ ಕುಲಕರ್ಣಿ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ರಂಜಾನ್ ಹೆಬಸೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ರಂಗಕರ್ಮಿ, ಉತ್ಸವ ರಾಕ್ ಗಾರ್ಡನ್ ಸಂಸ್ಥಾಪಕರಾದ ಕಲಾ ಗುರು ಡಾ. ಟಿ.ಬಿ. ಸೊಲಬಕ್ಕನವರ ಅವರ 79ನೇ ಜನ್ಮದಿನದ ಅಂಗವಾಗಿ, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಉತ್ಸವ ರಾಕ್ ಗಾರ್ಡನ್‌ನಲ್ಲಿ ಧಾರವಾಡ ಜಿಲ್ಲೆಯ ಹೆಬಸೂರಿನ ಉತ್ತರ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.
2022ನೇ ಸಾಲಿನ ಕನಕ–ಷರೀಫ್ ಕಾವ್ಯ ಪುರಸ್ಕಾರಕ್ಕೆ ಹಿರಿಯ ಕವಿ ಡಾ. ಚನ್ನಪ್ಪ ಅಂಗಡಿ, 2023ನೇ ಸಾಲಿಗೆ ಹಿರಿಯ ವಿಮರ್ಶಕ ಡಾ. ಜಾಜಿ ದೇವೇಂದ್ರಪ್ಪ, 2024ನೇ ಸಾಲಿಗೆ ಹಿರಿಯ ಸಾಹಿತಿ ಎ.ಎಸ್. ಮಕಾನದಾರ, 2025ನೇ ಸಾಲಿಗೆ ಹಿರಿಯ ಅನುವಾದಕಿ ಹಾಗೂ ಪತ್ರಕರ್ತೆ ಮಂಜುಳಾ ಕಿರುಗಾವಲು ಆಯ್ಕೆಯಾಗಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಅಬ್ದುಲ್ ಹೈ ತೋರಣಗಲ್ಲು, ಶ್ರೀಶೈಲ ಮಾದಣ್ಣವರ, ಪ್ರೊ. ರಂಜಾನ್ ಹೆಬಸೂರ, ದೀಪಾ ಗೋನಾಳ ಹಾಗೂ ಡಾ. ವೇದಾರಾಣಿ ದಾಸನೂರ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಈ ಹಿಂದೆ ಹಾವೇರಿ ಜಿಲ್ಲೆಯ ವಿಜಯಕಾಂತ್ ಪಾಟೀಲ, ಕೊಪ್ಪಳ ಜಿಲ್ಲೆಯ ಗಜಲ್ ಕವಿ ಅಲ್ಲಾ ಗಿರಿರಾಜ್, ದಾವಣಗೆರೆಯ ಬಿ. ಶ್ರೀನಿವಾಸ್ ಹಾಗೂ ಆಕಾಶವಾಣಿ ಧಾರವಾಡದ ಮಾಜಿ ನಿರ್ದೇಶಕ, ಕಥೆಗಾರ ಡಾ. ಬಸು ಬೇವಿನಗಿಡದ ಅವರು ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.



