ವಿಜಯಸಾಕ್ಷಿ ಸುದ್ದಿ, ರೋಣ: ರೋಣದಲ್ಲಿ ಪುನರಾರಂಭಗೊಂಡಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ತಾವೇ ಭರಿಸುವುದಾಗಿ ಶಾಸಕ ಜಿ.ಎಸ್. ಪಾಟೀಲ ಘೋಷಿಸಿದರು.
ಸೋಮವಾರ ಮುದೇನಗುಡಿ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
2013ರಲ್ಲಿ ಶಾಸಕನಾಗಿದ್ದ ವೇಳೆ ರೋಣಕ್ಕೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರಾಗಿದ್ದು, 8 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿತ್ತು. ಬಳಿಕ ಕಾಲೇಜು ಮಾಗಡಿಗೆ ಸ್ಥಳಾಂತರಗೊಂಡಿತ್ತು. ಇದೀಗ ಮತ್ತೆ ರೋಣಕ್ಕೆ ಮರಳಿ ತರಲಾಗಿದ್ದು, 240 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಈಗಾಗಲೇ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಸರ್ಕಾರಿ ನಿಯಮದಂತೆ ವಿದ್ಯಾರ್ಥಿಯೊಬ್ಬರಿಗೆ 5 ಸಾವಿರ ರೂ. ಶುಲ್ಕವಿದೆ. ಆದರೆ ಎಲ್ಲ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ತಾವೇ ಭರಿಸಲಿದ್ದು, ಈಗಾಗಲೇ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳಿಗೆ ಹಣವನ್ನು ಹಿಂತಿರುಗಿಸಲಾಗುವುದು ಎಂದು ತಿಳಿಸಿದರು.
ಕಾಲೇಜಿನ ಅಭಿವೃದ್ಧಿಗೆ 2.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ವರ್ಕ್ಶಾಪ್ ಹಾಗೂ ಕಾಂಪೌಂಡ್ ನಿರ್ಮಿಸಲಾಗುವುದು. ಅಲ್ಲದೆ 50 ಕೋಟಿ ರೂ. ವೆಚ್ಚದ ಜೆಟಿಟಿಐ ಮಹಾವಿದ್ಯಾಲಯದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಲೇಜು ಆರಂಭಿಸಲಾಗುವುದು. ಪಾಲಿಟೆಕ್ನಿಕ್ ಹಾಗೂ ಜೆಟಿಟಿಐ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನದ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಗುರುಪಾದ ದೇವರು ಮಾತನಾಡಿ, ವಿದ್ಯಾರ್ಥಿಗಳು ಪ್ರಾಮಾಣಿಕತೆ, ಪರಿಶ್ರಮ ಮತ್ತು ಶ್ರದ್ಧೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡದೆ ನಿರಂತರ ಕಲಿಕೆಯತ್ತ ಗಮನಹರಿಸಿದರೆ ಮಾತ್ರ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಿದ್ದಣ್ಣ ಬಂಡಿ, ಬಸವರಾಜ ನವಲಗುಂದ, ಯೂಸುಫ್ ಇಟಗಿ, ಮುತ್ತಣ್ಣ ಸಂಗಳದ, ಶಫೀಕ್ ಮೂಗನೂರ, ಶಿವಪ್ಪ ಕರಿಲಿಂಗಣ್ಣವರ, ರಂಗವ್ವ ಭಜಂತ್ರಿ, ಅಭಿಷೇಕ ನವಲಗುಂದ, ಯಲ್ಲಪ್ಪ ಕಿರೇಸೂರ, ಪ್ರಾಂಶುಪಾಲ ಮಹಾಂತೇಶ ಗುದ್ದಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಸಿವು ಇರಬೇಕು. ಪ್ರಾಮಾಣಿಕತೆ, ಪರಿಶ್ರಮ ಮತ್ತು ಶ್ರದ್ಧೆಯೇ ಯಶಸ್ಸಿನ ನಿಜವಾದ ಬಂಡವಾಳ.”
ಗುರುಪಾದ ದೇವರು



