ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರೈತರ ಆದಾಯ ಮತ್ತು ಬದುಕು ಸ್ಥಿರವಾಗಬೇಕಾದರೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ರವಿವಾರ ತಡರಾತ್ರಿ ಶಿರಹಟ್ಟಿ ಪಟ್ಟಣದಲ್ಲಿ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಸಹಕಾರಿ ಚಳುವಳಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ರೈತರು ಮಧ್ಯವರ್ತಿಗಳ ಹಾವಳಿ ಹಾಗೂ ಕಮಿಷನ್ ಇಲ್ಲದೆ ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಪಡೆಯುವ ಉದ್ದೇಶದಿಂದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಗಳು ಸ್ಥಾಪನೆಯಾಗಿವೆ. ಎಪಿಎಂಸಿ ಹಾಗೂ ಸಹಕಾರಿ ಸಂಸ್ಥೆಗಳು ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಇಂದು ರಾಜ್ಯದ ಅನೇಕ ಸಹಕಾರಿ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಖರೀದಿದಾರರಿಂದ ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೂ ಗದಗ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ರೈತರ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಶಿರಹಟ್ಟಿ ಟಿಎಪಿಸಿಎಂಎಸ್ ಸಂಸ್ಥೆಯ ಪುನಶ್ಚೇತನ ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು.
ತಾವು ಗೃಹ ಸಚಿವರಾಗಿದ್ದ ವೇಳೆ ಈ ಸಂಸ್ಥೆಯ ಪುನಶ್ಚೇತನಕ್ಕೆ ಮನವಿ ಬಂದ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಬಳಿಕ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅವರ ಸಹಕಾರದಿಂದ ಷೇರು ಬಂಡವಾಳ ಸಂಗ್ರಹಿಸಿ, ಮಾರ್ಕೆಟಿಂಗ್ ಫೆಡರೇಶನ್ ನೆರವಿನೊಂದಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಮುಂದೆಯೂ ಸಂಸ್ಥೆಗೆ ಅಗತ್ಯ ಬಂಡವಾಳ ಹಾಗೂ ಶೇ.1ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ತಾವು ಸಿದ್ಧವಿದ್ದು, ಸಂಸ್ಥೆ ಲಾಭದಾಯಕವಾಗಿ ಬೆಳೆಯಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಶಾಸಕ ಡಾ. ಚಂದ್ರು ಲಮಾಣಿ, ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ ಮಾತನಾಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಜ.ಫ. ಸಿದ್ದರಾಮ ಸ್ವಾಮೀಜಿ ವಹಿಸಿದ್ದರು.
ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಸಿ.ಸಿ. ನೂರಶೆಟ್ಟರ, ಎಲ್.ಡಿ. ಪಾಟೀಲ, ಜಿ.ವಿ. ಪಾಟೀಲ, ಸಂದೀಪ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಸಂದೇಶ ಗಾಣಿಗೇರ, ಫಕ್ಕೀರೇಶ ರಟ್ಟಿಹಳ್ಳಿ, ವಸಂತ ಜಗ್ಗಲರ, ಸುರೇಶ ಕಪ್ಪತ್ತನವರ, ಸುಮಾ ಶಿವಪ್ರಕಾಶ ಮಹಾಜನಶೆಟ್ಟರ, ಬಸವರಾಜ ತುಳಿ, ರಾಜು ಪಾಟೀಲ, ಮಹೇಶ ಮತ್ತೂರ, ಪಿಎಸ್‌ಐ ಈರಪ್ಪ ರಿತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ರೈತರ ಬದುಕು ಭದ್ರವಾಗಬೇಕಾದರೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಜಾರಿಯಾಗಬೇಕು. ಸಹಕಾರಿ ಸಂಸ್ಥೆಗಳೇ ರೈತರ ಆರ್ಥಿಕ ಶಕ್ತಿಯ ಕೇಂದ್ರವಾಗಬೇಕು.”
ಬಸವರಾಜ ಬೊಮ್ಮಾಯಿ



