ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ‘ಆಲ್ಕೋಹಾಲ್ ಇನ್ ಬಿವರೇಜ್’ ತೆರಿಗೆ ನೀತಿಯಿಂದ ಅಬಕಾರಿ ಇಲಾಖೆಯ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ.
ಮೇ 11ರಿಂದ ಜಾರಿಗೆ ಬಂದಿರುವ ಈ ನೀತಿಯಡಿ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತಿದ್ದು, ಇದರ ಪರಿಣಾಮವಾಗಿ ಗ್ರಾಹಕರ ಮದ್ಯ ಖರೀದಿ ಶೈಲಿಯಲ್ಲೂ ಬದಲಾವಣೆ ಕಂಡುಬಂದಿದೆ. ಹಾರ್ಡ್ ಲಿಕ್ಕರ್‌ಗಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಬಿಯರ್‌ಗಳತ್ತ ಗ್ರಾಹಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದಲ್ಲಿ ಬಿಯರ್ ಮಾರಾಟದಿಂದಲೇ ಸರ್ಕಾರಕ್ಕೆ 312.67 ಕೋಟಿ ರೂ. ಹೆಚ್ಚುವರಿ ಆದಾಯ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,602.14 ಕೋಟಿ ರೂ. ಆದಾಯ ಬಂದಿದ್ದರೆ, ಈ ಬಾರಿ 1,914.81 ಕೋಟಿ ರೂ. ಸಂಗ್ರಹವಾಗಿದೆ.
ಭಾರತೀಯ ಮದ್ಯ (IML) ಮಾರಾಟದಿಂದಲೂ ಆದಾಯ ಹೆಚ್ಚಾಗಿದ್ದು, ಕಳೆದ ವರ್ಷದ 7,407.53 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ 8,394.32 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಒಟ್ಟಾರೆಯಾಗಿ ಮೊದಲ ತ್ರೈಮಾಸಿಕದಲ್ಲಿ ಅಬಕಾರಿ ಇಲಾಖೆ 10,599.29 ಕೋಟಿ ರೂ. ರಾಜಸ್ವ ಸಂಗ್ರಹಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.14.39ರಷ್ಟು ಬೆಳವಣಿಗೆ ಕಂಡಿದೆ.
ಹೊಸ ತೆರಿಗೆ ನೀತಿಯಿಂದಾಗಿ ಪ್ರೀಮಿಯಂ ಲಾಗರ್ ಬಿಯರ್‌ಗಳ ಬೆಲೆಯಲ್ಲಿ ಇಳಿಕೆಯಾಗಿದ್ದು, ಗ್ರಾಹಕರ ಬೇಡಿಕೆ ಹೆಚ್ಚಾಗಿದೆ. ಕೆಲವು ಪ್ರೀಮಿಯಂ ಬಿಯರ್‌ಗಳ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.
ಇನ್ನು 2026-27ರ ಹಣಕಾಸು ವರ್ಷಕ್ಕೆ ಸರ್ಕಾರವು 45,000 ಕೋಟಿ ರೂ. ಅಬಕಾರಿ ಆದಾಯದ ಗುರಿ ಹೊಂದಿದ್ದು, ಆದಾಯ ಹೆಚ್ಚಳಕ್ಕಾಗಿ ಬಳಕೆಯಾಗದ ಹಾಗೂ ರದ್ದಾದ ಮದ್ಯದಂಗಡಿ ಮತ್ತು ಬಾರ್ ಪರವಾನಗಿಗಳನ್ನು ಆನ್‌ಲೈನ್ ಹರಾಜು ಮೂಲಕ ವಿಲೇವಾರಿ ಮಾಡಲು ಇಲಾಖೆ ಮುಂದಾಗಿದೆ.



