ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಪರಿಣಾಮ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಡ್ಯಾಂಗೆ ಹರಿದುಬರುವ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
ಇದೇ ಮೊದಲ ಬಾರಿಗೆ ಈ ಬಾರಿ ಡ್ಯಾಂನ ಒಳಹರಿವು 12 ಸಾವಿರ ಕ್ಯೂಸೆಕ್ ದಾಟಿದೆ.
ಕೊಡಗಿನಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರ ಪರಿಣಾಮ KRS ಡ್ಯಾಂನ ನೀರಿನ ಮಟ್ಟವೂ ಏರಿಕೆಯಾಗುತ್ತಿದ್ದು, ರೈತರಲ್ಲಿ ಡ್ಯಾಂ ಭರ್ತಿಯಾಗುವ ನಿರೀಕ್ಷೆ ಮೂಡಿದೆ.
ಸದ್ಯ KRS ಡ್ಯಾಂನ ನೀರಿನ ಮಟ್ಟ 85.66 ಅಡಿಗೆ ತಲುಪಿದೆ. ಡ್ಯಾಂನ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಾಗಿದೆ. ಜಲಾಶಯಕ್ಕೆ ಪ್ರಸ್ತುತ 12,694 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 734 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಡ್ಯಾಂನಲ್ಲಿ ಸದ್ಯ 13.512 ಟಿಎಂಸಿ ನೀರು ಸಂಗ್ರಹವಾಗಿದೆ. ಕೊಡಗಿನಲ್ಲಿ ಇದೇ ರೀತಿ ಮಳೆ ಮುಂದುವರಿದರೆ KRS ಡ್ಯಾಂ ಶೀಘ್ರದಲ್ಲೇ ಮತ್ತಷ್ಟು ಭರ್ತಿಯಾಗುವ ಸಾಧ್ಯತೆ ಇದೆ.
KRS ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಮಂಡ್ಯ ಸೇರಿದಂತೆ ಕಾವೇರಿ ನದಿ ನೀರನ್ನು ಅವಲಂಬಿಸಿರುವ ರೈತರಲ್ಲಿ ಸಂತಸ ಮೂಡಿಸಿದೆ. ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳಿಗೂ ಹೊಸ ಭರವಸೆ ಸಿಕ್ಕಿದೆ.



