ಹೈದರಾಬಾದ್: ‘ಫೌಜಿ’ ಚಿತ್ರದ ಚಿತ್ರೀಕರಣದ ವೇಳೆ ಹಿರಿಯ ನಟ ರಾಜೇಶ್ ಶರ್ಮ ಅವರಿಗೆ ಕೀಟ ಕಚ್ಚಿದ ಪರಿಣಾಮ ಆರೋಗ್ಯ ಗಂಭೀರಗೊಂಡಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಈ ಘಟನೆ ಬಳಿಕ ಅವರನ್ನು ಕೋಲ್ಕತ್ತಾದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತೀವ್ರ ನಿಗಾದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.
ಚಿತ್ರೀಕರಣ ಮುಗಿದ ಬಳಿಕ ದಟ್ಟ ಗಿಡಗಂಟಿಗಳಿದ್ದ ಪ್ರದೇಶದಲ್ಲಿ ತಂತ್ರಜ್ಞರೊಂದಿಗೆ ಮಾತನಾಡುತ್ತಿದ್ದ ವೇಳೆ ಕೀಟ ಕಚ್ಚಿದರೂ, ಅದನ್ನು ಸಾಮಾನ್ಯ ಎಂದು ಭಾವಿಸಿ ರಾಜೇಶ್ ಶರ್ಮ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ವಹಿಸಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಬಲಗಾಲಿನಲ್ಲಿ ತೀವ್ರ ನೋವು ಮತ್ತು ಜ್ವರ ಕಾಣಿಸಿಕೊಂಡಿದ್ದು, ಕೋಲ್ಕತ್ತಾ ತಲುಪಿದ ನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ.
ವೈದ್ಯರ ಪ್ರಕಾರ, ಸೋಂಕು ಕಾಲ್ಬೆರಳುಗಳಿಂದ ಮೊಣಕಾಲಿನವರೆಗೆ ವೇಗವಾಗಿ ಹರಡಿದ್ದು, ದೊಡ್ಡ ಗುಳ್ಳೆಗಳು ಕಾಣಿಸಿಕೊಂಡಿವೆ. ಜೊತೆಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುವ ಅಪಾಯವಿದ್ದು, ಅದು ಶ್ವಾಸಕೋಶಕ್ಕೆ ತಲುಪದಂತೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.
ಡಾ. ಅವಿಜಿತ್ ಭಟ್ಟಾಚಾರ್ಯ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಬಂಗಾಳ ಚಲನಚಿತ್ರ ಕಲಾವಿದರ ಸಂಘ ಹಾಗೂ ನಟ ಪ್ರೊಸೆಂಜಿತ್ ಚಟರ್ಜಿ ವೈದ್ಯಕೀಯ ನೆರವು ಒದಗಿಸುತ್ತಿದ್ದಾರೆ. ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ಮೂರು ದಶಕಗಳಿಂದ ಸಕ್ರಿಯವಾಗಿರುವ ರಾಜೇಶ್ ಶರ್ಮ, ಅನೇಕ ಯಶಸ್ವಿ ಸಿನಿಮಾಗಳು ಮತ್ತು ವೆಬ್‌ಸಿರೀಸ್‌ಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.



