ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲಿ ಬೆಸೆಯುವ ಸ್ನೇಹ ಜೀವನದ ಅತ್ಯಂತ ಅಮೂಲ್ಯ ಬಾಂಧವ್ಯವಾಗಿದ್ದು, ವರ್ಷಗಳು ಕಳೆದರೂ ಆ ಗೆಳೆತನದ ನೆನಪು ಎಂದಿಗೂ ಮಾಸುವುದಿಲ್ಲ ಎಂದು ಲಕ್ಷ್ಮೇಶ್ವರ ಎಪಿಎಂಸಿ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ ಹೇಳಿದರು.
ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಪುರಸಭೆ ಉಮಾ ವಿದ್ಯಾಲಯದ 1987-88ನೇ ಸಾಲಿನ ಎಸ್ಎಸ್ಎಲ್ಸಿ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿರುವ ಹಳೆಯ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಇತರ ಸಂಘಟನೆಗಳಿಗೂ ಮಾದರಿಯಾಗಿದೆ. ಹಳೆಯ ವಿದ್ಯಾರ್ಥಿಗಳ ಸಂಘಗಳು ಕೇವಲ ಸ್ನೇಹಮಿಲನಕ್ಕೆ ಸೀಮಿತವಾಗದೆ ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಘಟಿತ ಪ್ರಯತ್ನದಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ. ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವುದು ಅವರಲ್ಲಿ ಮತ್ತಷ್ಟು ಸಾಧನೆ ಮಾಡುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಬಸಣ್ಣ ಹೊಳಲಾಪುರ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಣ್ಣ ಬೆಟಗೇರಿ, ಸುರೇಶ ಜಗ್ಗಲ, ಶೇಖಣ್ಣ ಕಾಳೆ, ಗೆಳೆಯರ ಬಳಗದ ಅಧ್ಯಕ್ಷ ಬೀರಪ್ಪ ಕಾಳೆ, ಉಪಾಧ್ಯಕ್ಷ ಮಹಾಂತೇಶ ಪಡಿಗೇರಿ ಸೇರಿದಂತೆ ಬಳಗದ ಸದಸ್ಯರು, ಹಿರಿಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ಹಳೆಯ ವಿದ್ಯಾರ್ಥಿಗಳ ಸಂಘಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದರೆ ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಲು ಸಾಧ್ಯ.”
— ಬಸಣ್ಣ ಬೆಟಗೇರಿ



