HomeKarnataka Newsಬೆಂಗಳೂರಿನಲ್ಲಿ ಇ-ಆಟೋಗಳಿಗೆ ಪರ್ಮಿಟ್ ಕಡ್ಡಾಯ: ಸಾರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ!

ಬೆಂಗಳೂರಿನಲ್ಲಿ ಇ-ಆಟೋಗಳಿಗೆ ಪರ್ಮಿಟ್ ಕಡ್ಡಾಯ: ಸಾರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ!

For Dai;y Updates Join Our whatsapp Group

ಬೆಂಗಳೂರು: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಮಹತ್ವದ ನಿಯಮ ಜಾರಿಗೆ ತಂದಿದೆ.

ಇನ್ನು ಮುಂದೆ ಎಲೆಕ್ಟ್ರಿಕ್ ಆಟೋಗಳಿಗೂ ಆಟೋ ಪರ್ಮಿಟ್ ಕಡ್ಡಾಯವಾಗಲಿದೆ ಎಂದು ಇಲಾಖೆ ಆದೇಶ ಹೊರಡಿಸಿದೆ.

ಈವರೆಗೆ ಸಿಎನ್‌ಜಿ, ಎಲ್‌ಪಿಜಿ ಹಾಗೂ ಪೆಟ್ರೋಲ್ ಆಟೋಗಳಿಗೆ ಮಾತ್ರ ಪರ್ಮಿಟ್ ಕಡ್ಡಾಯವಾಗಿತ್ತು. ಆದರೆ ನಗರದಲ್ಲಿ ಎಲೆಕ್ಟ್ರಿಕ್ ಆಟೋಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಕಾನೂನು ಸಂಬಂಧಿತ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಹೊಸ ನಿಯಮದ ಪ್ರಕಾರ, ಎಲೆಕ್ಟ್ರಿಕ್ ಆಟೋ ಖರೀದಿಸಲು ಚಾಲನಾ ಪರವಾನಗಿ (DL) ಮತ್ತು ಆಟೋ ಪರ್ಮಿಟ್ ಹೊಂದಿರುವುದು ಕಡ್ಡಾಯವಾಗಿದೆ. ಇವೆರಡೂ ಇಲ್ಲದಿದ್ದರೆ ಹೊಸದಾಗಿ ಇ-ಆಟೋ ಖರೀದಿಸಲು ಅವಕಾಶ ಇರುವುದಿಲ್ಲ.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕ್ರಮ

ಪರ್ಮಿಟ್ ಇಲ್ಲದ ವಾಹನಗಳಲ್ಲಿ ಪ್ರಯಾಣಿಸುವ ವೇಳೆ ಅಪಘಾತ ಸಂಭವಿಸಿದರೆ ವಿಮಾ ಪರಿಹಾರ ಪಡೆಯುವಲ್ಲಿ ಸಮಸ್ಯೆ ಎದುರಾಗಬಹುದು. ನಿಯಮಗಳ ಪ್ರಕಾರ ಪರ್ಮಿಟ್ ಇಲ್ಲದ ವಾಹನಗಳಿಗೆ ವಿಮಾ ಸೌಲಭ್ಯ ಅನ್ವಯವಾಗದಿರುವ ಕಾರಣ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.

ಸಾಮಾನ್ಯ ಆಟೋಗಳಿಗೆ ಪರ್ಮಿಟ್ ಪಡೆಯಲು 500 ರೂಪಾಯಿ ಶುಲ್ಕ ಪಾವತಿಸಬೇಕು. ಆದರೆ ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಅನ್ನು ಉಚಿತವಾಗಿ ನೀಡಲು ಇಲಾಖೆ ನಿರ್ಧರಿಸಿದೆ.

ಪರ್ಮಿಟ್ ಇಲ್ಲದೆ ಇ-ಆಟೋ ಮಾರಾಟಕ್ಕೆ ಕಡಿವಾಣ

ಇತ್ತೀಚಿನ ವರ್ಷಗಳಲ್ಲಿ ಕೆಲವು ಎಲೆಕ್ಟ್ರಿಕ್ ಆಟೋ ಶೋರೂಮ್‌ಗಳು ಚಾಲಕರಿಗೆ ಪರ್ಮಿಟ್ ಅಗತ್ಯವಿಲ್ಲ ಎಂದು ತಪ್ಪು ಮಾಹಿತಿ ನೀಡಿ ವಾಹನ ಮಾರಾಟ ಮಾಡುತ್ತಿದ್ದ ಆರೋಪಗಳಿದ್ದವು. ಸಿಎನ್‌ಜಿ ಮತ್ತು ಎಲ್‌ಪಿಜಿ ಆಟೋಗಳಿಗೆ ಮಾತ್ರ ಪರ್ಮಿಟ್ ಬೇಕು, ಇವಿ ಆಟೋಗಳಿಗೆ ಬೇಡ ಎಂಬ ತಪ್ಪು ಕಲ್ಪನೆಯಿಂದ ಹಲವು ಮಂದಿ ಪರ್ಮಿಟ್ ಇಲ್ಲದೆ ಆಟೋಗಳನ್ನು ಖರೀದಿಸಿದ್ದರು.

ಬೆಂಗಳೂರಿನಲ್ಲಿ ಈಗಾಗಲೇ ಸುಮಾರು 3 ಲಕ್ಷಕ್ಕೂ ಅಧಿಕ ಸಿಎನ್‌ಜಿ ಮತ್ತು ಎಲ್‌ಪಿಜಿ ಆಟೋಗಳು ಪರ್ಮಿಟ್ ಹೊಂದಿವೆ. ಆದರೆ ಎಲೆಕ್ಟ್ರಿಕ್ ಆಟೋಗಳಿಗೆ ಈ ನಿಯಮ ಅನ್ವಯವಾಗಿರಲಿಲ್ಲ.

ಅಕ್ರಮ ಕಾರ್ಯಾಚರಣೆಗೆ ಕಡಿವಾಣ ಸಾಧ್ಯತೆ

ಕೆಲವು ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು ಪರ್ಮಿಟ್ ನಿಯಮಗಳ ಕೊರತೆಯನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಆಟೋಗಳನ್ನು ಬಳಸಿಕೊಂಡಿದ್ದವು ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಹೊರರಾಜ್ಯದ ಚಾಲಕರನ್ನು ಕರೆತಂದು ಆಟೋ ಓಡಿಸಲಾಗುತ್ತಿದೆ ಎಂಬ ವಿಚಾರ ಸ್ಥಳೀಯ ಆಟೋ ಚಾಲಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದೀಗ ಎಲೆಕ್ಟ್ರಿಕ್ ಆಟೋಗಳಿಗೂ ಪರ್ಮಿಟ್ ಕಡ್ಡಾಯವಾಗಿರುವುದರಿಂದ ಅನಧಿಕೃತವಾಗಿ ಆಟೋ ಸೇವೆ ನಡೆಸುವವರಿಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img