ಮುಂಬೈ: ಹಿಂದಿ ಕಿರುತೆರೆಯ ಖ್ಯಾತ ನಟ ರೋಹಿತ್ ಚಂದೇಲ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
16 ವರ್ಷದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪದಡಿ ನಟನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಾಲಕಿಯನ್ನು ಹಿಂಬಾಲಿಸುವುದು, ಕಿರುಕುಳ ನೀಡುವುದು ಹಾಗೂ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
29 ವರ್ಷದ ರೋಹಿತ್ ಚಂದೇಲ್ ಅವರು ‘ಪಾಂಡ್ಯ ಸ್ಟೋರ್’ ಹಾಗೂ ‘ಕಾಶಿಬಾಯಿ ಬಾಜೀರಾವ್ ಬಲ್ಲಾಳ್’ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದರು. ಪಂತ್ ನಗರ ಪೊಲೀಸರು ದಹಿಸರ್‌ನಲ್ಲಿರುವ ಅವರ ನಿವಾಸದಿಂದ ಬಂಧಿಸಿ, ಬಳಿಕ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ನಟನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ದೂರಿನ ಪ್ರಕಾರ, ನಟ ರೋಹಿತ್ ಅವರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಬಾಲಕಿಗೆ ಪದೇ ಪದೇ ಕರೆ ಮಾಡುತ್ತಿದ್ದರು ಎನ್ನಲಾಗಿದೆ. ಬೇರೆ ಬೇರೆ ಸಂಖ್ಯೆಗಳ ಮೂಲಕವೂ ಸಂಪರ್ಕಿಸಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಜುಲೈ 5ರಂದು ಮುಂಬೈನ ಉಪನಗರ ಪ್ರದೇಶದಲ್ಲಿ ಬಾಲಕಿಯಿದ್ದ ಸ್ಥಳಕ್ಕೆ ಬಂದಿದ್ದ ನಟ, ಆಕೆಯನ್ನು ಹಿಂಬಾಲಿಸಿ ಗಲಾಟೆ ನಡೆಸಿ, ನಿಂದಿಸಿ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಟ ಮತ್ತು ಬಾಲಕಿಗೆ ಮೊದಲೇ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.



