ದಾವಣಗೆರೆ: ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ ಸಂಬಂಧಿಸಿದ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ನಿಯಮಿತ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿದ ಬಳಿಕ ಕಾನೂನು ಪ್ರಕ್ರಿಯೆಯಂತೆ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಅನುಮೋದನೆ ನೀಡಿದೆ.
ಮಠದಲ್ಲಿದ್ದ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಲಾಗಿದ್ದು, ನಂತರ ತನಿಖೆಯ ಹೊಣೆಗಾರಿಕೆಯನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಪ್ರಕರಣದಲ್ಲಿ ಮುಂಚಿತವಾಗಿ ಪಡೆದಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಸಂತ್ರಸ್ತ ಬಾಲಕನ ತಾಯಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೂನ್ 25ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿ, ಮೂರು ವಾರಗಳೊಳಗೆ ನಿಯಮಿತ ಜಾಮೀನು ಪಡೆಯಲು ಅವಕಾಶ ಕಲ್ಪಿಸಿತ್ತು.
ಈ ಹಿನ್ನೆಲೆಯಲ್ಲಿ ಜೂನ್ 27ರಂದು ವಚನಾನಂದ ಸ್ವಾಮೀಜಿ ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ನಿಯಮಿತ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಆದೇಶ ಹೊರಬಿದ್ದ ಬೆನ್ನಲ್ಲೇ ಸ್ವಾಮೀಜಿಯ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.



