ವಿಜಯಸಾಕ್ಷಿ ಸುದ್ದಿ, ಅಣ್ಣಿಗೇರಿ: ಕನ್ನಡದ ಆದಿಕವಿ ಪಂಪನ ಜನ್ಮಸ್ಥಳವಾದ ಅಣ್ಣಿಗೇರಿಯ ರೈಲ್ವೆ ನಿಲ್ದಾಣಕ್ಕೆ ‘ಆದಿಕವಿ ಪಂಪ ರೈಲ್ವೆ ನಿಲ್ದಾಣ’ ಎಂದು ನಾಮಕರಣ ಮಾಡಬೇಕೆಂಬ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಅಕಾಡೆಮಿ ಫಾರ್ ಕ್ರಿಯೇಟಿವ್ ಲರ್ನಿಂಗ್ ವತಿಯಿಂದ ನಡೆಸಲಾಗುತ್ತಿರುವ ನಿರಂತರ ಹೋರಾಟ ಮತ್ತು ಪ್ರಯತ್ನಗಳ ಸಮಗ್ರ ದಾಖಲೆ ಪುಸ್ತಕವನ್ನು ಧಾರವಾಡ ಜಿಲ್ಲಾಧಿಕಾರಿಗಳು ಹಾಗೂ ನೈರುತ್ಯ ರೈಲ್ವೆಯ ಮಹಾಪ್ರಬಂಧಕರಿಗೆ ಅಧಿಕೃತವಾಗಿ ಸಲ್ಲಿಸಲಾಯಿತು.
ಜತೆಗೆ, ಈ ಬೇಡಿಕೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ತುರ್ತಾಗಿ ಶಿಫಾರಸು ಮಾಡುವಂತೆ ಮನವಿ ಪತ್ರವನ್ನೂ ಸಲ್ಲಿಸಲಾಯಿತು.
ಕನ್ನಡ ಸಾಹಿತ್ಯದ ಆದಿಕವಿ ಪಂಪ ಅವರ ಕೊಡುಗೆ ಅಪಾರವಾಗಿದ್ದು, ಅವರ ಜನ್ಮಭೂಮಿಯಾದ ಅಣ್ಣಿಗೇರಿಯ ರೈಲ್ವೆ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡುವುದು ಕನ್ನಡ ನಾಡು, ಸಾಹಿತ್ಯ ಮತ್ತು ಇತಿಹಾಸಕ್ಕೆ ಸಲ್ಲಿಸುವ ಸೂಕ್ತ ಗೌರವವಾಗಲಿದೆ ಎಂದು ಅಕಾಡೆಮಿ ಅಭಿಪ್ರಾಯಪಟ್ಟಿದೆ.
ಈ ಸಂದರ್ಭದಲ್ಲಿ ಅಕಾಡೆಮಿ ಫಾರ್ ಕ್ರಿಯೇಟಿವ್ ಲರ್ನಿಂಗ್ ಸಂಸ್ಥೆಯ ಅಧ್ಯಕ್ಷ ಡಾ. ಮಹಮ್ಮದ್ ಸಾದಿಕ್ ಸೈಯದ್, ನಿರ್ದೇಶಕರಾದ ಶಿವಾನಂದ ಚವಡಿ, ವಿಠ್ಠಲ ರಾಮಣ್ಣವರ ಹಾಗೂ ಶಿವಾನಂದ ಕಪ್ಪತ್ತನವರ ಉಪಸ್ಥಿತರಿದ್ದರು.



