ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಬಹಿರ್ದೆಸೆಗೆಂದು ಮನೆಯಿಂದ ತೆರಳಿದ್ದ 21 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಟಗೇರಿ ಹರಿಜನಕೇರಿಯ ನಿವಾಸಿ ಕಾವ್ಯಾ ತಂದೆ ಪಂಚಾಕ್ಷರಿ ದೊಡ್ಡಮನಿ (21) ಜುಲೈ 11ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಹಿರ್ದೆಸೆಗೆಂದು ಮನೆಯಿಂದ ತೆರಳಿದ್ದು, ಬಳಿಕ ಮನೆಗೆ ವಾಪಸ್ ಆಗಿಲ್ಲ. ಸಂಬಂಧಿಕರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ತಾಯಿ ಸುಶೀಲಾ ಪಂಚಾಕ್ಷರಿ ದೊಡ್ಡಮನಿ ನೀಡಿದ ದೂರಿನ ಮೇರೆಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 67/2026ರ ಅಡಿಯಲ್ಲಿ ಮಹಿಳೆ ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾವ್ಯಾ ಸುಮಾರು 5 ಅಡಿ 4 ಇಂಚು ಎತ್ತರ ಹೊಂದಿದ್ದು, ಸಾಧಾರಣ ಮೈಕಟ್ಟು, ಕೆಂಪು ಮೈಬಣ್ಣ, ಕೋಲುಮುಖ, ನೆಟ್ಟನೆಯ ಮೂಗು, ಕಪ್ಪು ಕಣ್ಣು ಹಾಗೂ ಉದ್ದನೆಯ ಕಪ್ಪು ಕೂದಲು ಹೊಂದಿದ್ದಾಳೆ. ಎಡ ಮುಂಗೈ ಮೇಲೆ ಹಳೆಯ ಗಾಯದ ಕಲೆ ಮತ್ತು ಎಡಗಾಲಿನ ಪಾದದ ಮೇಲೆ ಸುಟ್ಟ ಗಾಯದ ಕಲೆ ಗುರುತಾಗಿ ಇದೆ. ಮನೆಯಿಂದ ಹೊರಡುವಾಗ ಕೆಂಪು ಬಣ್ಣದ ಲಾಂಗ್ ಚೂಡಿದಾರ ಧರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಬೆಟಗೇರಿ ಪೊಲೀಸ್ ಠಾಣೆ (ದೂ. 08372-246333), ಪಿಎಸ್ಐ ಮೊ. 9480804449 ಅಥವಾ ಗದಗ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ (08372-238300 / 9480804400)ಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.



