ವಿಜಯಸಾಕ್ಷಿ ಸುದ್ದಿ, ಧಾರವಾಡ: ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಮನೆಯಿಂದ ತೆರಳಿದ್ದ 24 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು, ಆಕೆಯ ಪತ್ತೆಗೆ ಧಾರವಾಡ ಉಪನಗರ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಧಾರವಾಡದ ಕೆಸಿಡಿ ಸರ್ಕಲ್ ಸಮೀಪದ ಪಿಡಬ್ಲ್ಯುಡಿ ಕ್ವಾರ್ಟರ್ಸ್ ನಿವಾಸಿ, ಸರ್ಕಾರಿ ನೌಕರ ರಾಜಣ್ಣ ರೇವಪ್ಪ ಲೋಣಿ ಅವರ ಪುತ್ರಿ ರೂಪಾ ರಾಜಣ್ಣ ಲೋಣಿ (24) ಜುಲೈ 13ರಂದು ಸಂಜೆ ಸುಮಾರು 4.45ಕ್ಕೆ “ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ತೆರಳಿದ್ದರು. ಆದರೆ, ಬಳಿಕ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ.
ಕುಟುಂಬಸ್ಥರು ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ರಾಜಣ್ಣ ಲೋಣಿ ಅವರು ಧಾರವಾಡ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಠಾಣೆಯಲ್ಲಿ ಅಪರಾಧ ಸಂಖ್ಯೆ 167/2026ರಡಿ ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರೂಪಾ ಸುಮಾರು 5 ಅಡಿ 3 ಇಂಚು ಎತ್ತರ, ಬೆಳ್ಳನೆಯ ಮೈಬಣ್ಣ, ದುಂಡು ಮುಖ, ನೀಟಾದ ಮೂಗು, ಕಪ್ಪು ಕೂದಲು ಹಾಗೂ ತೆಳುವಾದ ಮೈಕಟ್ಟು ಹೊಂದಿದ್ದಾರೆ. ಮನೆಯಿಂದ ಹೊರಡುವಾಗ ಗುಲಾಬಿ ಹಾಗೂ ಬಿಳಿ ಬಣ್ಣ ಮಿಶ್ರಿತ ಚೂಡಿದಾರ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಯುವತಿ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಂಟ್ರೋಲ್ ರೂಮ್ (100 / 0836-2233555), ಧಾರವಾಡ ಉಪನಗರ ಪೊಲೀಸ್ ಠಾಣೆ (0836-2233511 / 9480802033) ಅಥವಾ ಕುಟುಂಬಸ್ಥರ ಮೊಬೈಲ್ ಸಂಖ್ಯೆ 9901951719ಗೆ ಮಾಹಿತಿ ನೀಡುವಂತೆ ಧಾರವಾಡ ಉಪನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.



