ದಾವಣಗೆರೆ: ದಾವಣಗೆರೆಯಲ್ಲಿ ಭಾರೀ ಸಂಚಲನ ಮೂಡಿಸಿರುವ ಜಿಮ್ ಟ್ರೈನರ್ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್ಮೇಲ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಪವರ್ ಫಿಟ್ನೆಸ್ ಜಿಮ್ನ ಟ್ರೈನರ್ ಹಾಗೂ ಮಾಲೀಕ ಇಸ್ಮಾಯಿಲ್ ವಿರುದ್ಧ ಸಂತ್ರಸ್ತೆಯೊಬ್ಬರು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಆರೋಪಿ ತನ್ನನ್ನು “ಆಕಾಂಕ್ಷ್” ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದು, ಜಿಮ್ನ ವಾತಾವರಣ ಹಾಗೂ ಹೆಸರನ್ನು ನೋಡಿ ತಾನು ಹಿಂದೂ ಜಿಮ್ ಎಂದು ನಂಬಿ ಸೇರಿದ್ದಾಗಿ ತಿಳಿಸಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಮಾತ್ರ ಆತನ ನಿಜವಾದ ಹೆಸರು ಇಸ್ಮಾಯಿಲ್ ಎಂಬುದು ತಿಳಿದಿತ್ತೆಂದು ಹೇಳಿದ್ದಾರೆ.
ಜಿಮ್ನ ಡ್ರೆಸ್ಸಿಂಗ್ ರೂಂನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ಮಹಿಳೆಯರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ, ಬಳಿಕ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಫೋನ್ಪೇ ಹಾಗೂ ನಗದು ರೂಪದಲ್ಲಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಸ್ಮಾಯಿಲ್ ತನ್ನನ್ನು ಕರೆದಾಗ ಬರದಿದ್ದರೆ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಅಲ್ಲದೆ, ಕಳೆದ ಮೂರು-ನಾಲ್ಕು ತಿಂಗಳಿಂದ ತನ್ನ ಪತಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ತಮ್ಮ ಕುಟುಂಬವು ಸುಸಂಸ್ಕೃತ ಹಾಗೂ ಆರ್ಥಿಕವಾಗಿ ಸ್ಥಿರವಾಗಿದ್ದು, ಹನಿಟ್ರ್ಯಾಪ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಇಸ್ಮಾಯಿಲ್ ತಾಯಿ ಸುದ್ದಿಗೋಷ್ಠಿ ನಡೆಸಿ ತಮ್ಮ ಮಗ ಹನಿಟ್ರ್ಯಾಪ್ಗೆ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದರು. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸಂತ್ರಸ್ತೆ, ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಸಂತ್ರಸ್ತೆಯ ಪ್ರಕಾರ, ಆರೋಪಿ “ಆಕಾಶ್”, “ಕಿರಣ್”, “ಆಕಾಂಕ್ಷ್” ಸೇರಿದಂತೆ ವಿವಿಧ ಹೆಸರುಗಳನ್ನು ಬಳಸಿ ಮಹಿಳೆಯರೊಂದಿಗೆ ಪರಿಚಯ ಬೆಳೆಸುತ್ತಿದ್ದ. ಈತನ ಬಲೆಗೆ 15ಕ್ಕೂ ಹೆಚ್ಚು ಮಹಿಳೆಯರು ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದು, ಮಾನ-ಮರ್ಯಾದೆಗೆ ಹೆದರಿ ಅನೇಕರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದಲ್ಲದೆ, ಆರೋಪಿಯ ಮೊದಲ ವಿವಾಹವೂ ದೀರ್ಘಕಾಲದ ಅನೈತಿಕ ಸಂಬಂಧದ ಕಾರಣ ಮುರಿದುಬಿದ್ದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಮನೆ ಬಳಿ ಗಲಾಟೆ ನಡೆಸಿದ್ದ ಹಿನ್ನೆಲೆಯಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂಬ ಆರೋಪವನ್ನೂ ಸಂತ್ರಸ್ತೆ ಮಾಡಿದ್ದಾರೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ದಾವಣಗೆರೆ ಪೊಲೀಸರು ಜಿಮ್ಗಳ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿದ್ದು, ಜಿಲ್ಲೆಯ ಜಿಮ್ ಮಾಲೀಕರು ಹಾಗೂ ತರಬೇತುದಾರರ ಸಭೆ ನಡೆಸಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.



