ಬೆಂಗಳೂರು: ಬಿಡುಗಡೆಯ ಮುನ್ನವೇ ದೇಶಾದ್ಯಂತ ಭರ್ಜರಿ ಹೈಪ್ ಸೃಷ್ಟಿಸಿರುವ ‘ಟಾಕ್ಸಿಕ್’ ಸಿನಿಮಾ ತನ್ನ ಪ್ರಚಾರ ತಂತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ‘ತಬಾಹಿ’ ಹಾಡಿನ ಭಾರೀ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ಬಿಡುಗಡೆ ಮಾಡಿರುವ ‘ಮನಮೋಹಕ’ ರೊಮ್ಯಾಂಟಿಕ್ ವೀಡಿಯೋ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ.
ಮಾಂಟಾಜ್ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡು ಯಶ್ ಮತ್ತು ತಾರಾ ಸುತಾರಿಯಾ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ತೆರೆ ಮೇಲೆ ಕಟ್ಟಿಕೊಡುತ್ತದೆ. ಇಬ್ಬರ ಕೆಮಿಸ್ಟ್ರಿಯ ಜೊತೆಗೆ ನಯನತಾರಾ ಹಾಗೂ ಕಿಯಾರಾ ಅಡ್ವಾಣಿ ಅವರ ವಿಶೇಷ ಝಲಕ್ಗಳು ಕಥಾಹಂದರದ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಚಿತ್ರದ ಸಸ್ಪೆನ್ಸ್ ಇನ್ನಷ್ಟು ಗಟ್ಟಿಗೊಳಿಸಿವೆ.
ಪ್ರಮೋದ್ ಮರವಂತೆ ಸಾಹಿತ್ಯ, ತನಿಷ್ಕ್ ಬಾಗ್ಚಿ, ಫಹೀನ್ ಅಬ್ದುಲ್ಲಾ ಮತ್ತು ಅರ್ಸ್ಲಾಂ ನಿಝಾಮಿ ಸಂಗೀತ ಸಂಯೋಜನೆಯ ಈ ಗೀತೆ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮಧುರ ಸಂಗೀತ, ಅದ್ದೂರಿ ಛಾಯಾಗ್ರಹಣ ಮತ್ತು ದೃಶ್ಯ ವೈಭವದಿಂದ ಹಾಡು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿದೆ.
ಚಿತ್ರದ ಪ್ರಚಾರವನ್ನು ಹಂತ ಹಂತವಾಗಿ ಕಟ್ಟಿಕೊಡುತ್ತಿರುವ ತಂಡ, ಇನ್ನೂ ಮೂರು ವಿಶೇಷ ಹಾಡುಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. ಪ್ರತಿಯೊಂದು ಹಾಡಿನ ಮೂಲಕ ಚಿತ್ರದ ಕುತೂಹಲವನ್ನು ಹೆಚ್ಚಿಸುತ್ತಿರುವ ‘ಟಾಕ್ಸಿಕ್’, ಬಿಡುಗಡೆಯ ಮುನ್ನವೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಚರ್ಚೆಗೆ ಗ್ರಾಸವಾಗಿದ್ದು, ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.



