Homekoppalಎಂಎಚ್‌ಪಿಎಸ್ ಕಟ್ಟಡ ಉಳಿಸಿ ಇತಿಹಾಸ ಪರಂಪರೆ ಸಂರಕ್ಷಿಸಿ

ಎಂಎಚ್‌ಪಿಎಸ್ ಕಟ್ಟಡ ಉಳಿಸಿ ಇತಿಹಾಸ ಪರಂಪರೆ ಸಂರಕ್ಷಿಸಿ

Spread the love

ಹಳೆಯ ವಿದ್ಯಾರ್ಥಿಗಳ ಒತ್ತಾಯ

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಇಲ್ಲಿನ ನಗರಸಭೆ ಬಳಿಯ ಸ್ಟೇಷನ್ ರಸ್ತೆಯಲ್ಲಿರುವ ನಗರದ ಪ್ರತಿಷ್ಠಿತ ಸರ್ಕಾರಿ ಎಂಎಚ್‌ಪಿಎಸ್ (ಇಂದಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ) ಕಟ್ಟಡಕ್ಕೆ ಸುಮಾರು 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಹೈದರಾಬಾದ್ ನವಾಬರ ಆಳ್ವಿಕೆಯ ಕಾಲದ ಪ್ರಮುಖ ಆಡಳಿತಾಧಿಕಾರಿಯ ಬಂಗಲೆಯಾಗಿದ್ದ ಈ ಐತಿಹಾಸಿಕ ಕಟ್ಟಡ ನೆಲಸಮಗೊಳಿಸಿ ಗುರುಭವನ ನಿರ್ಮಿಸಲು ಉದ್ದೇಶಿಸಿರುವ ಕ್ರಮ ಕೈಬಿಡಬೇಕು.ಆಕರ್ಷಕ ಕಟ್ಟಡವನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಂಡು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಬೇಕು ಅಥವಾ ಪಾರಂಪರಿಕ ಕಟ್ಟಡವಾಗಿ ಸಂರಕ್ಷಿಸಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ರವಿವಾರ ಸಂಜೆ ಶಾಲಾ ಆವರಣದಲ್ಲಿ ಸಭೆ ಸೇರಿದ ಹಳೆಯ ವಿದ್ಯಾರ್ಥಿಗಳು ಶಾಲೆ ಹಾಗೂ ಈ ಆವರಣದೊಂದಿಗಿನ ಒಡನಾಟವನ್ನು ಮೆಲುಕು ಹಾಕುವುದರ ಜೊತೆಗೆ ಐತಿಹಾಸಿಕ ಹಿನ್ನೆಲೆಯುಳ್ಳ ಶಾಲೆಯ ಮುಖ್ಯ ಕಟ್ಟಡವನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಂಡು ಈ ಭಾಗದ ಚರಿತ್ರೆಯ, ಪರಂಪರೆಯ ದ್ಯೋತಕವನ್ನಾಗಿ ಮುಂದಿನ ಪೀಳಿಗೆಗೆ ಪರಿಚಯಿಸಲು ಕಾಪಾಡಿಕೊಳ್ಳಬೇಕು.

ಸ್ಟೇಷನ್ ರಸ್ತೆಯ ಎಂಎಚ್‌ಪಿಎಸ್ ಶಾಲೆ ಸುಮಾರು 7 ದಶಕಗಳ ಇತಿಹಾಸ ಹೊಂದಿದೆ.ಇಂದಿನ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದ ಗುಣಮಟ್ಟದ ಶಿಕ್ಷಣ ನೀಡಿದೆ.ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಮಹತ್ವದ ಸಾಧನೆ ಮಾಡಿದ ಸರ್ಕಾರಿ ಶಾಲೆ ಇದಾಗಿದೆ. ಸಾರ್ವಜನಿಕ ವಲಯದ ಶಿಕ್ಷಣ ಸಂಸ್ಥೆಗೆ ಮಾದರಿಯಾಗಿ ಈ ಶಾಲೆಯನ್ನು ಪುನರ್ ರೂಪಿಸಿ ,ಅಭಿವೃದ್ಧಿ ಪಡಿಸುವ ಸಂಕಲ್ಪ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಆಗಬೇಕಾಗಿದೆ.

ಹೈದ್ರಾಬಾದ್ ನವಾಬರ ಆಳ್ವಿಕೆಯ ಕಾಲದಲ್ಲಿ ಜಹಗೀರು ಜಿಲ್ಲೆಯಾಗಿದ್ದ ಕೊಪ್ಪಳ ಐತಿಹಾಸಿಕ ಹಿನ್ನೆಲೆ ಯ ಸ್ಮಾರಕವೂ ಕೂಡ ಇದಾಗಿದೆ.
ಮುಖ್ಯ ಕಟ್ಟಡದ ಎರಡೂ ಬದಿಗೆ ಗೋಲಾಕಾರದ ಕೊಠಡಿಗಳು, ಹೊರಗಿನ ಪರಿಸರ ವೀಕ್ಷಿಸಬಹುದಾದ ಜಾಲರಿ ಮಾದರಿಯ ಕಾಂಕ್ರೀಟ್ ರಚನೆಯ ಕಾರಿಡಾರ್, ವಿಶಾಲ ಸೆಂಟ್ರಲ್ ಹಾಲ್, ಐದಾರು ಕೊಠಡಿಗಳನ್ನು ಹೊಂದಿದೆ.ಮೊದಲ ನೋಟಕ್ಕೆ ತನ್ನತ್ತ ಆಕರ್ಷಿಸುವ ಚುಂಬಕ ಶಕ್ತಿ ಹೊಂದಿರುವ ಈ ಭವ್ಯ ಕಟ್ಟಡವನ್ನು ಉಳಿಸಿಕೊಳ್ಳುವುದು ಶಾಲೆಯ ಹಳೆಯ ವಿದ್ಯಾರ್ಥಿಗಳಷ್ಟೇ ಅಲ್ಲ ಕೊಪ್ಪಳದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯೂ ಆಗಿದೆ.ಈ ಕುರಿತು ಶಿಕ್ಷಣ ಸಚಿವರು,ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆ ನಿರ್ಣಯಿಸಿತು.

ಪತ್ರಕರ್ತ ಬಸವರಾಜ ಕರುಗಲ್ ಮಾತನಾಡಿ, ಕೊಪ್ಪಳದಲ್ಲಿದ್ದ ಐತಿಹಾಸಿಕ ಕಮಾನುಗಳನ್ನು ಈಗಾಗಲೇ ನೆಲಸಮಗೊಳಿಸಿ ಊರಿನ ಅಸ್ಮಿತೆಯನ್ನು ಕಳೆಯಲಾಗಿದೆ. ಈಗ ನಾವು ಕಲಿತ ಶಾಲೆ ಹಾಗೂ ಶಾಲೆಯ ನೆನಪುಗಳನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಕೈ ಹಾಕಿರುವುದು ಖಂಡನೀಯ. ನವಾಬರ ಕಾಲದ ಕಟ್ಟಡಗಳು ನಮ್ಮ ಹೆಮ್ಮೆಯ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಈ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕೊಪ್ಪಳದ ಸಮಸ್ತ ನಾಗರಿಕರಿಗೂ ಇದೆ ಎಂದರು.

ಮಂಜುನಾಥ ಗೊಂಡಬಾಳ ಮಾತನಾಡಿ, ಜಿಲ್ಲಾ ಗುರುಭವನ ಬೇರೆ ಕಡೆ ಇದಕ್ಕಿಂತ ವಿಶಾಲವಾದ ಸ್ಥಳದಲ್ಲಿ ನಿರ್ಮಿಸಲಿ, ಐತಿಹಾಸಿಕ ಕಟ್ಟಡ ಧ್ವಂಸ ಮಾಡುವುದು ಬೇಡ ಈ ಕುರಿತು ಶಾಸಕರು,ಚುನಾಯಿತ ಪ್ರತಿನಿಧಿಗಳ ಗಮನ ಸೆಳೆಯೋಣ ಎಂದರು.

ಪ್ರಾಸ್ತಾವಿಕ ಮಾತನಾಡಿದ ಡಿ.ಗುರುರಾಜ , ಪ್ರಾಚೀನ ಸ್ಮಾರಕಗಳು ಹಾಗೂ 100 ವರ್ಷಗಳಿಗಿಂತ ಹಳೆಯದಾದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕಾನೂನಿನಲ್ಲಿ ಅವಕಾಶಗಳಿವೆ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.

ನಾಗರಾಜನಾಯಕ ಡೊಳ್ಳಿನ ಮಾತನಾಡಿ, ನವಾಬರ ಆಳ್ವಿಕೆಯ ಕಾಲದಲ್ಲಿ ಜಿಲ್ಲಾಧಿಕಾರಿ/ಉಪವಿಭಾಗಾಧಿಕಾರಿ ಬಂಗಲೆಯಾಗಿದ್ದ ಈ ನಿವಾಸವನ್ನು ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸೂಚನೆ ಮೇರೆಗೆ ಭಾರತದ ಸೇನೆ ವಶಪಡಿಸಿಕೊಂಡು ಹೈದ್ರಾಬಾದ್ ವಿಮೋಚನೆಗೆ ಪ್ರಮುಖ ಹೆಜ್ಜೆ ಇರಿಸಿತ್ತು.ಇಂತಹ ಮಹತ್ವದ ಘಟನೆಗೆ ಸಾಕ್ಷಿಯಾದ ಈ ಕಟ್ಟಡ ಉಳಿಸಿಕೊಂಡರೆ,ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸಲು ಸಹಕಾರಿಯಾಗುತ್ತದೆ ಎಂದರು.

ಪ್ರಶಾಂತ ಮಾದಿನೂರ, ಗಿರೀಶ ಪಾನಘಂಟಿ, ಮಂಜುನಾಥ ಡೊಳ್ಳಿನ, ರಾಜೀವ್ ಭದ್ರಾಪೂರ, ಸಂತೋಷ ಹಾಲಳ್ಳಿ, ಅಮರೇಶ ಮುರಲಿ, ಬಸವೇಶ ಕೋರಿ,ಕೃಷ್ಣ ಚಿತ್ರಗಾರ, ವಿನೋದ ಚೆನ್ನಿನಾಯ್ಕರ್, ಸಜ್ಜಾದ ಹುಸೇನ್, ಮಂಜುನಾಥ ಸೊಂಡ್ಲಿ, ಅಮರೇಶ ಕೋರಿ, ಶ್ರೀನಿವಾಸ, ಶ್ರೀಕಾಂತ್ ಭದ್ರಾಪೂರ ಮತ್ತಿತರ ಹಳೆಯ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!