ಬಾಗಲಕೋಟೆ: ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಿಲ್ಲಿಸಿದ್ದ ಮಹೀಂದ್ರಾ ಎಕ್ಸ್ಯುವಿ 300 ಕಾರು ಸ್ಫೋಟಗೊಂಡ ಘಟನೆ ನಡೆದಿದೆ.
ಗ್ರಾಮದ ಯುವರಾಜ ವೈನ್ ಶಾಪ್ ಎದುರು ನಿಲ್ಲಿಸಿದ್ದ ಕಾರು ಏಕಾಏಕಿ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಕಾರು ಪಲ್ಟಿಯಾಗಿ ಬೆಂಕಿಗೆ ಆಹುತಿಯಾಗಿದೆ. ಕಾರಿನ ಬಿಡಿಭಾಗಗಳು ಛಿದ್ರಗೊಂಡು ಸುತ್ತಮುತ್ತಲ ಪ್ರದೇಶದಲ್ಲಿ ಬಿದ್ದಿವೆ.
ಸ್ಫೋಟದಿಂದ ಓರ್ವ ವ್ಯಕ್ತಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಸ್ಫೋಟಗೊಂಡ ಕಾರು ಎಂ.ಜಿ. ತೋರಗಲ್ ಅವರ ಹೆಸರಿನಲ್ಲಿದ್ದು, ವೈನ್ ಶಾಪ್ ಮ್ಯಾನೇಜರ್ ಹನುಮಂತ ಸಂಗೊಂಡ ಅವರು ಕಾರನ್ನು ತಂದಿದ್ದರು ಎನ್ನಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಜಮಖಂಡಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಸೊಕೊ ತಂಡ ಹಾಗೂ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರು ಸ್ಫೋಟಕ್ಕೂ ಮುನ್ನ ಯಾವುದೇ ಹಾನಿಯಾಗಿರಲಿಲ್ಲ. ಹೀಗಾಗಿ ಯಾರೋ ಕಾರಿನಲ್ಲಿ ಸ್ಫೋಟಕ ಇಟ್ಟಿರಬಹುದು ಎಂದು ಹನುಮಂತ ಸಂಗೊಂಡ ಶಂಕೆ ವ್ಯಕ್ತಪಡಿಸಿದ್ದಾರೆ.
ಅದೃಷ್ಟವಶಾತ್ ಕಾರು ಚಾಲನೆಯಲ್ಲಿದ್ದ ವೇಳೆ ಈ ಘಟನೆ ಸಂಭವಿಸಿಲ್ಲ. ಒಂದು ವೇಳೆ ಚಲಿಸುತ್ತಿದ್ದಾಗ ಸ್ಫೋಟವಾಗಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಅವರು ತಿಳಿಸಿದ್ದಾರೆ.
ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.



