Homekoppalಬಿಜೆಪಿಯಿಂದ ನಿತ್ಯ ಪಿಕ್ ಪಾಕೆಟ್ ನಡೀತಾ ಇದೆ: ಡಿಕೆಶಿ

ಬಿಜೆಪಿಯಿಂದ ನಿತ್ಯ ಪಿಕ್ ಪಾಕೆಟ್ ನಡೀತಾ ಇದೆ: ಡಿಕೆಶಿ

Spread the love

-ಇನ್ನೊಬ್ಬರನ್ನ ಟೀಕೆ ಮಾಡೊ ಬದಲು ನಮ್ಮನೆ ಸುಭದ್ರವಾಗಿ ಕಟ್ಟೋಣ

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ರಾಜ್ಯ, ದೇಶದಲ್ಲಿ ನಿತ್ಯ ಪಿಕ್ ಪಾಕೆಟ್ ನಡೀತಾ ಇದೆ. ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಳ ಮಾಡುವ ಮೂಲಕ ಆಡಳಿತದಲ್ಲಿರುವ ಸರಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೊಪ್ಪಳದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ನ ಡಿಜಿಟಲ್ ಸದಸ್ಯತ್ವ ನೋಂದಣಿಯ ಪ್ರಗತಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ರಾಜ್ಯದಲ್ಲೇ ಹೆಚ್ಚಾಗಿರುವುದು ಸಂತೋಷದ ಸಂಗತಿ.‌ ಅದರಲ್ಲೂ ಗಂಗಾವತಿ ವಿಧಸನಸಭಾ ಕ್ಷೇತ್ರ, ರಾಮನಗರವನ್ನೇ ಮೀರಿಸಿದೆ ಎಂದರೆ ಜನ ಬಿಜೆಪಿ ಆಡಳಿತದಿಂದ ಎಷ್ಟು ರೋಸಿ ಹೋಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.

ಬಿಜೆಪಿಯದ್ದು ಭ್ರಷ್ಟ ಸರಕಾರ. ಎಲ್ಲದರಲ್ಲೂ ಪರ್ಸಂಟೇಜ್. ಜನರಿಗೆ ಕರೆಂಟ್ ಕಟ್. ಜನರ ಜೇಬೂ ಕಟ್. ಈಗ ಪುನೀತ್ ಸಿನಿಮಾ ಜೇಮ್ಸ್ ಕಿತ್ತು ಹಾಕಲು ಹೊರಟಿದ್ದಾರೆ. ಇದು ಕನ್ನಡದ ಸ್ವಾಭಿಮಾನದ ಪ್ರಶ್ನೆ. ಬಿಜೆಪಿ ಬೆಲೆ ತೆರಬೇಕಾಗುತ್ತೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಇವತ್ತಿನವರೆಗೆ ಕೊಪ್ಪಳ ಜಿಲ್ಲೆಯಲ್ಲಿ 1,84,302 ಕಾಂಗ್ರೆಸ್‌ ಡಿಜಿಟಲ್ ಸದಸ್ಯತ್ವ ನೋಂದಣಿಯಾಗಿದೆ. ಅತಿ ಹೆಚ್ಚು ಜನರನ್ನು‌ ನೋಂದಣಿ ಮಾಡಿದವರನ್ನು ಇಲ್ಲೇ ಸನ್ಮಾನ ಮಾಡುವುದು ದೊಡ್ಡ ವಿಷಯವಲ್ಲ, ಇನ್ನೂ 7 ದಿನ ಸಮಯಾವಕಾಶ ಇದೆ. ಈ ಸಮಯವನ್ನು ಕಾಂಗ್ರೆಸ್ ಬಂಧುಗಳು ಸದುಪಯೋಗ ಪಡೆದುಕೊಳ್ಳಬೇಕು. ಅತಿ ಹೆಚ್ಚು ಸದಸ್ಯತ್ವ ನೋಂದಣೊ ಮಾಡಿಸಿದವರನ್ನು ರಾಜಧಾನಿ‌ ಬೆಂಗಳೂರಿಗೆ ಆಹ್ವಾನಿಸಿ ಗೌರವಿಸುವುದಾಗಿ ಭರವಸೆ ನೀಡಿದರು.

ಅವರಿವರನ್ನು ಟೀಕೆ ಮಾಡುವ ಬದಲು ಮೊದಲಿಗೆ ನಮ್ಮ ಮನೆಯನ್ನು ಸುಭದ್ರವಾಗಿ ಕಟ್ಟೋಣ. ಆನಂತರ ಇನ್ನೊಬ್ಬರ ಮನೆ ವಿಚಾರದ ಬಗ್ಗೆ ಮಾತಾಡೋಣ. ಮುಂಬರುವ 7 ದಿನಗಳಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ 1 ಲಕ್ಷ ಸದಸ್ಯತ್ವ ನೋಂದಣಿಯಾಗಲಿ. ಬಿಜೆಪಿ, ದಳ ಸೇರಿದಂತೆ ಎಲ್ಲ‌ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಕರೆ ತನ್ನಿ. ನಮ್ಮಷ್ಟಕ್ಕೆ ನಾವೇ ಕಾಲು ಎಳೆಯದಿದ್ದರೆ ಜಿಲ್ಲೆಯ 5ಕ್ಕೆ 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಖಂಡರು, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಮಾತನಾಡಿ, ಸದಸ್ಯತ್ವ ನೋಂದಣಿಗೆ‌ಂದು ಮನೆ ಮನೆಗೆ‌ ತೆರಳುವ ನಮ್ಮ ಕಾಂಗ್ರೆಸ್ ಮುಖಂಡರಿಗೆ ಜನರಿಂದ ಅದ್ದೂರಿ ಸ್ವಾಗತ ಸಿಗುತ್ತಿದೆ. ಬಿಜೆಪಿಯವರು ಜಾತಿ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಹೇಳಿ ಸಂತೋಷದಿಂದ ಕಾಂಗ್ರೆಸ್ ಸದಸ್ಯತ್ವ ಪಡೆಯುತ್ತಿದ್ದಾರೆ. ಸದಸ್ಯತ್ವ ನೋಂದಣಿಯ ಸಾಧನೆಯಲ್ಲಿ‌ ಪಾಲ್ಗೊಂಡ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣ ಇಟ್ಟಂಗಿ ನಿರೂಪಿಸಿದರು. ಕಾಟನ್ ಪಾಷಾ ವಂದಿಸಿದರು.


ಡಿ.ಕೆ ಬದಲು ಎಚ್.ಡಿ!!
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ‌ ಮಾತನಾಡುವಾಗ ಜಿಲ್ಲಾಧ್ಯಕ್ಷ ತಂಗಡಗಿ ಸಮಯ ಬಹಳ ಇಲ್ಲ ಎಂದು‌ ಕಿವಿಯಲ್ಲಿ ಹೇಳಿದ್ದೇ ತಡ, ಕ್ಷಣ ಅವಕ್ಕಾದ ಅನ್ಸಾರಿ. ಸಹಕಾರ ನೀಡಿದ ಡಿ.ಕೆ.ಯವರಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳುವಾಗ ಡಿ.ಕೆ. ಬದಲು ಎಚ್.ಡಿ. ಎಂದು ಉಚ್ಛರಿಸಿ, ಆನಂತರ ಸರಿಪಡಿಸಿಕೊಂಡರು.


4 ಗಂಟೆ ಲೇಟ್!:
ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿದ್ದ ಕಾಂಗ್ರೆಸ್ ಕಾರ್ಯಕ್ರಮ ಶುರುವಾಗಿದ್ದು ಬರೋಬ್ಬರಿ 4 ಗಂಟೆ ತಡವಾಗಿ. ಇದಕ್ಕಾಗಿ ಡಿ.ಕೆ.ಶಿವಕುಮಾರ್‌ ಕ್ಷಮಾಪಣೆ ಕೇಳಿದರು.


ಕಾರ್ಯಕರ್ತರಿಂದ ಉದ್ಘಾಟನೆ:
ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳನ್ನು ಪಕ್ಷದ ವರಿಷ್ಠರು ಉದ್ಘಾಟಿಸುತ್ತಾರೆ. ಆದರೆ ಕೊಪ್ಪಳದ ಕಾರ್ಯಕ್ರಮವನ್ನು ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅತಿ ಹೆಚ್ಚು ನೋಂದಣಿ ಮಾಡಿಸಿದ ಜಿಲ್ಲೆಯ 5 ಕ್ಷೇತ್ರಗಳ ಕಾರ್ಯಕರ್ತರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!