ವಿಜಯಸಾಕ್ಷಿ ಸುದ್ದಿ, ನವಲಗುಂದ:
ಮರಳು ಸಾಗಿಸಲು ಅಧಿಕೃತ ದಾಖಲೆಗಳನ್ನು ಹೊಂದಿರುವ ಲಾರಿಗಳನ್ನು ಹಿಡಿದು ಪ್ರಕರಣ ದಾಖಲಿಸುವುದು, ಪರವಾನಿಗೆ ಇಲ್ಲದೇ ಮರಳು ಸಾಗಿಸುವ ಲಾರಿಗಳನ್ನು ಹಿಡಿದು ತಮಗಿಷ್ಟ ಬಂದಂತೆ ಪೊಲೀಸ್ ಇಲಾಖೆಯವರು ಬಿಟ್ಟು ಕಳಿಸುವುದನ್ನು ಖಂಡಿಸಿ ಲಾರಿ ಹಾಗೂ ಟಿಪ್ಪರ್ ಮಾಲಿಕರ ಸಂಘದವರು ಪೊಲೀಸ್ ಠಾಣೆಯ ಎದುರು ಶನಿವಾರ ಪ್ರತಿಭಟನೆ ಮಾಡಿದರು.
ಮರಳು ಸಾಗಿಸಲು ಪರವಾನಿಗೆ ಹೊಂದಿರದ ಹಾಗೂ ಹೇವಿ ಲೋಡ್ ಹಾಕಿಕೊಂಡು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದನ್ನು (ಕೆಎ26 ಎ 5742) ಪೊಲೀಸ್ ಅಧಿಕಾರಿಗಳು ಶುಕ್ರವಾರ ರಾತ್ರಿ ಹಿಡಿದು ಯಾವುದೇ ಪ್ರಕರಣವನ್ನು ದಾಖಲಿಸದೇ ಮೌಖಿಕವಾಗಿ ಮಾತುಕತೆ ನಡೆಸಿ ಬಿಟ್ಟು ಕಳುಹಿಸುತ್ತಿದ ಸಂದರ್ಭದಲ್ಲಿ ಸ್ಥಳೀಯ ಲಾರಿ ಹಾಗೂ ಟಿಪ್ಪರ್ ಮಾಲಿಕರ ಸಂಘದವರು ಪೊಲೀಸ್ ಠಾಣೆಯ ಎದುರು ಲಾರಿ ತಡೆದು ಪ್ರತಿಭಟನೆ ನಡೆಸಿದರು.
ಪೊಲೀಸ್ ಅಧಿಕಾರಿಗಳು ತಮಗಿಷ್ಟ ಬಂದಂತೆ ಮರಳು ಸಾಗಿಸುವ ಲಾರಿಗಳನ್ನು ಹಿಡಿಯುತ್ತಾರೆ, ಮಾತುಕತೆ ಸಫಲವಾದರೆ ಬಿಟ್ಟು ಕಳಿಸುತ್ತಾರೆ, ಮಾತುಕತೆ ಸಫಲವಾಗದಿದ್ದರೆ ಪ್ರಕರಣ ದಾಖಲಿಸುತ್ತಿದ್ದು, ಇದು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಅಧಿಕೃತ ಪರವಾನಿಗೆ ಹೊಂದಿರುವ ಪ್ರಾಮಾಣಿಕ ಟಿಪ್ಪರ್ ಮಾಲಿಕರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಪೊಲೀಸರ ವಿರುದ್ದ ಹರಿಹಾಯ್ದರು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದು ನ್ಯಾಯ ಒದಗಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಪಿಐ ಚಂದ್ರಶೇಖರ ಮಠಪತಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‍ನ ದಾಖಲೆಗಳನ್ನು ಪರಿಶೀಲಿಸಿದಾಗ ಮರಳು ಸಾಗಿಸುವ ಯಾವುದೇ ಪರವಾನಿಗೆ ಹೊಂದಿರದ ಕಾರಣ ಗಣಿ ಮತ್ತು ಭೂವಿಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಹೇಳಿ ಟಿಪ್ಪರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡ ಘಟನೆ ನಡೆಯಿತು.
ಪ್ರತಿಭಟನೆಯಲ್ಲಿ ಲಾರಿ ಹಾಗೂ ಟಿಪ್ಪರ್ ಮಾಲಿಕರ ಸಂಘದ ಗೌರವಾಧ್ಯಕ್ಷ ರಾಜೇಸಾಬ ಹಂಚಿನಾಳ, ಅಧ್ಯಕ್ಷ ಖಾಜೆಸಾಬ ಹಂಚಿನಾಳ, ಉಪಾಧ್ಯಕ್ಷ ಸಿದ್ದಪ್ಪ ಹಿರಶೆಡ್ಡಿ, ಕಾರ್ಯದರ್ಶಿ ಆನಂದ ಕುಮ್ಮಿ, ಬಸವರಾಜ ಕರಮಳ್ಳಿ, ಲಿಯಾಕಲ್ ಕಾಸ್ತರ, ಹೈದರಲಿ ಜಮಖಾನ, ಸಿದ್ದಪ್ಪ ಮೇಲಿನಮನಿ ಪಾಲ್ಗೊಂಡಿದ್ದರು.