ವಿಜಯಸಾಕ್ಷಿ ಸುದ್ದಿ, ನವಲಗುಂದ:
ತಮ್ಮೋಳಗಿನ ಭಯ ಒತ್ತಡಗಳನ್ನು ಬದಿಗಿಟ್ಟು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳನ್ನು ಗಳಿಸುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದರ ಮೂಲಕ ಸ್ವಾಗತಿಸಿದರು.
ಸೋಮವಾರ ಕ್ಷೇತ್ರದ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಶುಭ ಹಾರೈಸಿದರು.
ನವಲಗುಂದ ಬಾಲಕ ಬಾಲಕಿಯರ ಮಾಡೆಲ್ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಎಸ್.ಮಾಯಾಚಾರಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದ ಮೂಲಕ ಸ್ವಾಗತಿಸಿಕೊಂಡರು.
ಪರೀಕ್ಷಾ ಅವಧಿ ಮುಗಿದ ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಮಾಯಾಚಾರಿ, ಕೊವಿಡ್ ಮಾರ್ಗಸೂಚಿಯಂತೆಯೇ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಗೆ ಹಾಜರಾಗಲು ಒಟ್ಟು 2588 ವಿದ್ಯಾರ್ಥಿಗಳು ನೊಂದಾಯಿಸಲ್ಪಟ್ಟಿದ್ದರು ಇದರಲ್ಲಿ 10 ಪರೀಕ್ಷಾ ಕೇಂದ್ರಗಳಲ್ಲಿ 24 ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದಾರೆ.
ಬಹು ಚರ್ಚಿತ ಹಿಜಾಬ್ ಧರಿಸುವ ವಿಚಾರವಾಗಿ ಯಾವೊಬ್ಬ ಮುಸ್ಲಿಂ ವಿದ್ಯಾರ್ಥಿನಿಯು ಗೈರಾಗದೇ ಸಾಮರಸ್ಯ ಮೆರೆದಿದ್ದು ಈ ಕ್ಷೇತ್ರದ ಕೋಮು ಸೌಹಾರ್ದತೆಗೆ ಹಿಡಿದ ಕನ್ನಡಿಯಾಗಿದೆ. ಮುನ್ನೆಚ್ಚರಿಕೆಯಾಗಿ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷಾ ಪೂರ್ವದಲ್ಲಿಯೇ ಮೇಲಾಧಿಕಾರಿಗಳು ಹಾಗೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಮಾರ್ಗದರ್ಶನದಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿದ ಪರಿಣಾಮವೇ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದು ಹೆಮ್ಮೆ ಎನಿಸುತ್ತದೆ ಎಂದು ಬಿ.ಎಸ್.ಮಾಯಾಚಾರಿ ಹೇಳಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಒದಗಿಸಲಾಗಿತ್ತು.