ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕವು ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಮಾಧ್ಯಮ ಕ್ರಿಕೆಟ್ ಲೀಗ್ ಹಿನ್ನೆಲೆಯಲ್ಲಿ ರೂರಲ್ ಕಿಂಗ್ಸ್ ತಂಡದ ಲೋಗೋ, ಪ್ರೋಮೋ ಹಾಗೂ ಜರ್ಸಿಯನ್ನು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಅನಾವರಣಗೊಳಿಸಲಾಯಿತು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಪತ್ರಕರ್ತರು ನಿರಂತರ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕ್ರೀಡಾಕೂಟಗಳು ಮಾನಸಿಕ ನೆಮ್ಮದಿ ನೀಡುವ ಜತೆಗೆ ಪರಸ್ಪರ ಬಾಂಧವ್ಯವನ್ನು ಬೆಳೆಸುವ ವೇದಿಕೆಯಾಗುತ್ತವೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ವಿನ್ನರ್ಸ್ ತಂಡದ ಮಾಲೀಕ ಅನಂತ ಕಾರ್ಕಳ ಮಾತನಾಡಿ, ಕ್ರೀಡೆಗಳು ಮಾನಸಿಕ ಒತ್ತಡ ನಿವಾರಿಸುವ ಜೊತೆಗೆ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತವೆ. ಜಿಲ್ಲೆಯ ವಿವಿಧ ಭಾಗಗಳ ಪತ್ರಕರ್ತರು ಒಂದೇ ವೇದಿಕೆಯಲ್ಲಿ ಸೇರುವುದರಿಂದ ಆತ್ಮೀಯತೆ ಮತ್ತು ಸ್ನೇಹ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಪತ್ರಿಕಾ ದಿನಾಚರಣೆ ಅಂಗವಾಗಿ ಈ ವರ್ಷ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಲವು ಸಮಾಜಮುಖಿ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗದಗದಲ್ಲಿ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜಿಸಿರುವುದು ವಿಶೇಷವಾಗಿದ್ದು, ಎಲ್ಲಾ ತಂಡಗಳ ಆಟಗಾರರು ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡು ಮಾದರಿಯಾಗಬೇಕು ಎಂದರು.
ನೈಟ್ ರೈಡರ್ಸ್ ತಂಡದ ಮಾಲೀಕ ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಚ್.ಎಂ. ಶರೀಫನವರ, ದೇವಪ್ಪ ಲಿಂಗದಾಳ, ಸುನೀಲ ತೆಂಬದಮನಿ, ರವಿಕಾಂತ ಅಂಗಡಿ, ಟಿ.ಎನ್. ಭಾಂಡಗೆ, ಶರಣು ದೊಡ್ಡೂರ, ಅರುಣಕುಮಾರ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಮಾಧ್ಯಮ ಕ್ರಿಕೆಟ್ ಲೀಗ್‌ನಂತಹ ಕಾರ್ಯಕ್ರಮಗಳಿಂದ ಜಿಲ್ಲೆಯ ಪತ್ರಕರ್ತರೆಲ್ಲರೂ ಒಂದೇ ವೇದಿಕೆಯಲ್ಲಿ ಸೇರುವ ಅವಕಾಶ ದೊರೆಯುತ್ತದೆ. ನಿತ್ಯದ ಒತ್ತಡದ ನಡುವೆ ಇಂತಹ ವಿನೂತನ ಕಾರ್ಯಕ್ರಮಗಳು ಅಗತ್ಯ. ಮುಂದೆಯೂ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ.”
– ಜಗದೀಶ್ ಎಸ್.ಪಿ., ಸಂಪಾದಕರು, ರತ್ನಾಕರವಾಣಿ ಕನ್ನಡ ದಿನಪತ್ರಿಕೆ ಹಾಗೂ ರೂರಲ್ ಕಿಂಗ್ಸ್ ತಂಡದ ಮಾಲೀಕರು



