ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕ ಸೇವೆ ಹಾಗೂ ಬಾಕಿ ಕಡತಗಳ ವಿಲೇವಾರಿಯಲ್ಲಿ ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ ಮಾಡಬಾರದು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಆಡಳಿತ ಹಾಗೂ ಇಲಾಖಾ ಕಾರ್ಯಕಲಾಪಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಆಡಳಿತಾತ್ಮಕ ಕಡತಗಳು, ಸಾರ್ವಜನಿಕ ಅರ್ಜಿಗಳು ಹಾಗೂ ಭೂ-ಕಂದಾಯ ಸಂಬಂಧಿತ ಪ್ರಸ್ತಾವನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಹಲವು ತಿಂಗಳುಗಳಿಂದ ಹಾಗೂ ವರ್ಷಗಳಿಂದ ಬಾಕಿ ಉಳಿದಿರುವ ಕಡತಗಳನ್ನು ನಿಯಮಾನುಸಾರ ತಕ್ಷಣ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಡತಗಳ ಪರಿಶೀಲನೆ ವೇಳೆ ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕು. ಆಡಳಿತಾತ್ಮಕ ಅಥವಾ ತಾಂತ್ರಿಕ ಲೋಪಗಳಿದ್ದರೆ ತಕ್ಷಣವೇ ಸರಿಪಡಿಸಬೇಕು. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಹಾಗೂ ಮೇಲ್ಮನವಿಗಳಿಗೆ ನಿಗದಿತ ಅವಧಿಯೊಳಗೆ ನಿಖರ ಮಾಹಿತಿ ನೀಡಬೇಕು. ಅರ್ಜಿಗಳನ್ನು ಅನಗತ್ಯವಾಗಿ ಮುಂದೂಡುವ ಪ್ರವೃತ್ತಿ ಸಲ್ಲದು ಎಂದು ತಿಳಿಸಿದರು.
ಅಧಿಕಾರಿಗಳು ಕಚೇರಿ ಕೆಲಸಕ್ಕೆ ಮಾತ್ರ ಸೀಮಿತವಾಗದೆ ಅಗತ್ಯವಿದ್ದಲ್ಲಿ ಸ್ಥಳ ಪರಿಶೀಲನೆ ನಡೆಸಬೇಕು. ಉಪವಿಭಾಗ ಮಟ್ಟದಲ್ಲಿ ನಿಯಮಿತ ಸಭೆಗಳನ್ನು ನಡೆಸಿ ಕಂದಾಯ ಇಲಾಖೆಯ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.
ಮುಜರಾಯಿ ದೇವಾಲಯಗಳಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೇವೆ ಒದಗಿಸಬೇಕು. ದೇವಾಲಯಗಳ ಸುರಕ್ಷತೆಗಾಗಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಆದಾಯ, ಹುಂಡಿ ಎಣಿಕೆ ಹಾಗೂ ವೆಚ್ಚದ ಲೆಕ್ಕಪತ್ರಗಳನ್ನು ನಿಯಮಿತವಾಗಿ ಪರಿಶೀಲಿಸಿ ಪಾರದರ್ಶಕತೆ ಕಾಪಾಡಬೇಕು ಎಂದು ಸೂಚಿಸಿದರು.
ಅರ್ಚಕರು ಹಾಗೂ ದೇವಾಲಯಗಳ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಆಧಾರ್ ಮತ್ತು ಆರ್‌ಟಿಸಿ (RTC) ದಾಖಲೆಗಳನ್ನು ನವೀಕರಿಸುವಂತೆ ಹಾಗೂ ತಹಶೀಲ್ದಾರರು ದೇವಾಲಯಗಳ ಆಡಳಿತವನ್ನು ಖುದ್ದು ಪರಿಶೀಲಿಸುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ತಾಲೂಕು ಮಟ್ಟದಲ್ಲಿ ಭೂ ಕಂದಾಯ ಪ್ರಕರಣಗಳು, ಆಕಾರ್‌ಬಂಧ್ ತಿದ್ದುಪಡಿ, ಖಾತೆ ಬದಲಾವಣೆ ಹಾಗೂ ಸಾರ್ವಜನಿಕ ಅರ್ಜಿಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವಿವಿಧ ಮುಜರಾಯಿ ದೇವಾಲಯಗಳಲ್ಲಿ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಾದೇಶಿಕ ಆಯುಕ್ತರು ನೀಡಿರುವ ಎಲ್ಲ ಸೂಚನೆಗಳನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ವಿವಿಧ ತಾಲೂಕುಗಳ ತಹಶೀಲ್ದಾರರು, ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
“ಸಾರ್ವಜನಿಕ ಸೇವೆ ಮತ್ತು ಬಾಕಿ ಕಡತಗಳ ವಿಲೇವಾರಿಯಲ್ಲಿ ವಿಳಂಬಕ್ಕೆ ಅವಕಾಶವಿಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು.”
– ಜಾನಕಿ ಕೆ.ಎಂ., ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ



