ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗೊಜನೂರ ಸಮೀಪ ಆಟೋರಿಕ್ಷಾ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಆಟೋರಿಕ್ಷಾದಲ್ಲಿದ್ದ ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಗದಗ ಮೂಲದ ಒಂದೇ ಕುಟುಂಬದ ಸದಸ್ಯರು ಲಕ್ಷ್ಮೇಶ್ವರದ ದೂದಪೀರಾ ದರ್ಗಾಕ್ಕೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ, ಲಕ್ಷ್ಮೇಶ್ವರದಿಂದ ಗದಗದತ್ತ ಬರುತ್ತಿದ್ದ ಗೂಡ್ಸ್ ವಾಹನ ಎದುರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಪ್ರಯಾಣಿಕರು ರಸ್ತೆಗೆ ಚದುರಿ ಬಿದ್ದಿದ್ದಾರೆ.
ಅಪಘಾತದಲ್ಲಿ ಅಬೂಬಕರ್ ಹುಬ್ಬಳ್ಳಿ (30), ಮುಸ್ತಾಕ್ ಹುಬ್ಬಳ್ಳಿ (25), ಆಯೇಷಾ ಹುಬ್ಬಳ್ಳಿ (30), ಬಿಸ್ಮಿಲ್ಲಾ ಹುಬ್ಬಳ್ಳಿ (48) ಹಾಗೂ ಮೂರು ವರ್ಷದ ಮಗು ಅಬೂಬಕರ್ ಹುಬ್ಬಳ್ಳಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮತ್ತೊಬ್ಬರಾದ ದಿಲ್‌ಶ್ಯಾದ್ ಕುನ್ನುಟಗಿ (64) ಗಾಯಗೊಂಡಿದ್ದು, ಎರಡು ವರ್ಷದ ನೂರೈಸ್ ಎಂಬ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ಗಾಯಾಳುಗಳ ತಲೆ, ಮುಖ, ಕಣ್ಣು, ಕೈ-ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದರು.
ಅಪಘಾತದ ಬಳಿಕ ಗೂಡ್ಸ್ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

