ಬೆಂಗಳೂರು: ಬಾಡಿಗೆ ಮನೆಯಲ್ಲೇ ವಾಸವಿದ್ದ ಸಾಫ್ಟ್‌ವೇರ್ ಎಂಜಿನಿಯರ್, ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ದೃಶ್ಯಗಳನ್ನು ಮೊಬೈಲ್‌ನಲ್ಲಿ ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಖಾಸಗಿತನಕ್ಕೆ ಧಕ್ಕೆ ತರುವ ಮತ್ತೊಂದು ಗಂಭೀರ ಪ್ರಕರಣವಾಗಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಆತ ಕಳೆದ ಐದು ವರ್ಷಗಳಿಂದ ಅದೇ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದನು. ಜುಲೈ 27ರಂದು ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ವೇಳೆ ಕಿಟಕಿಯ ಬಳಿ ಯಾರೋ ಮೊಬೈಲ್ ಹಿಡಿದು ನಿಂತಿರುವ ಅನುಮಾನ ಅವರಿಗೆ ಮೂಡಿತ್ತು.
ಸಂದೇಹ ವ್ಯಕ್ತವಾದ ಬಳಿಕ ಮನೆ ಮಾಲಕಿ ಪಕ್ಕದ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಆರೋಪಿ ಮಂಜುನಾಥ್ ಅಲ್ಲಿಂದ ಓಡಿ ಹೋಗುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.
ತಕ್ಷಣವೇ ಬೇಗೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆತನ ಮೊಬೈಲ್ ಪರಿಶೀಲಿಸಲಾಗಿದೆ. ಪರಿಶೀಲನೆ ವೇಳೆ ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ಹಲವು ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ಇಂತಹ ವಿಡಿಯೋಗಳನ್ನು ಇನ್ನೆಲ್ಲೆಡೆ ಬಳಸಿದ್ದಾನೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



