ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಲಕ್ಷಾಮದ ಆತಂಕ ಎದುರಾಗಿದ್ದು, ಗದಗ ನಗರದ ಭೀಷ್ಮ ಕೆರೆ ಸೇರಿದಂತೆ ಜಿಲ್ಲೆಯ ಎಲ್ಲ ಕೆರೆಗಳನ್ನು ಮಲಪ್ರಭಾ ಹಾಗೂ ತುಂಗಭದ್ರಾ ನದಿಯ ನೀರಿನಿಂದ ಭರ್ತಿ ಮಾಡಲು ಜಿಲ್ಲಾಡಳಿತ, ನಗರಸಭೆ ಹಾಗೂ ನೀರಾವರಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹಿಸಿದ್ದಾರೆ.
ಸೋಮವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು, ಜಿಲ್ಲೆಯಲ್ಲಿರುವ 32 ಕೆರೆಗಳಿಗೆ ನೀರು ತುಂಬಿಸಿದರೆ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಬಹುತೇಕ ನಿವಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಗದಗ ನಗರದ ಮಧ್ಯಭಾಗದಲ್ಲಿರುವ ಭೀಷ್ಮ ಕೆರೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಅದನ್ನು ಕೂಡಲೇ ತುಂಬಿಸಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಕೊಳವೆಬಾವಿ ಹಾಗೂ ಬಾವಿಗಳಲ್ಲಿ ನೀರಿನ ಸಂಗ್ರಹ ವೃದ್ಧಿಯಾಗಲಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಆರು ತಿಂಗಳವರೆಗೆ ನೀರಿನ ಸಮಸ್ಯೆ ತಪ್ಪಲಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಜ್ಯದ ಎಲ್ಲಾ ಕೆರೆಗಳನ್ನು ತುಂಬಿಸುವ ಕುರಿತು ಈಗಾಗಲೇ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಜನಪ್ರತಿನಿಧಿಗಳು ಈ ಯೋಜನೆಯನ್ನು ಗದಗ ಜಿಲ್ಲೆಯಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದ್ದಾರೆ.
“ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿದರೆ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಗಣನೀಯವಾಗಿ ಕಡಿಮೆಯಾಗಲಿದೆ.”
– ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ



