ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಕೀರ್ತನ ಮೂವ್ಹಿ ಮೇಕರ್ಸ್ ಹಾಗೂ ಕೆಆರ್ಎಸ್ ಪ್ರೊಡಕ್ಷನ್, ಬೆಂಗಳೂರು ಬ್ಯಾನರ್ ಅಡಿಯಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ನಿರ್ಮಾಣವಾಗಿರುವ ‘ಹೂಗಾರ’ ಕನ್ನಡ ಚಲನಚಿತ್ರದ ಡಬ್ಬಿಂಗ್ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಗದಗ ನಗರದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಗೊಳ್ಳಲಿದೆ.
ಚಿತ್ರದ ಚಿತ್ರೀಕರಣವನ್ನು ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಸಿದ್ದನಕೊಳ್ಳ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 30 ದಿನಗಳ ಕಾಲ ನಡೆಸಲಾಗಿದೆ. ಉತ್ತರ ಕರ್ನಾಟಕದ ಭಾಷೆ, ಸಂಸ್ಕೃತಿ ಮತ್ತು ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಿರುವುದು ಚಿತ್ರದ ವಿಶೇಷವಾಗಿದೆ.
ಶ್ರೀಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ಮತ್ತೊಂದು ವಿಶೇಷ. “ಇದು ಕೇವಲ ಒಂದು ಕಂಬವಲ್ಲ; ಕರ್ನಾಟಕದ ಆತ್ಮ, ಶಕ್ತಿ, ಶಿಸ್ತು ಮತ್ತು ಸಾಧನೆಯ ಪ್ರತೀಕ” ಎಂದು ಚಿತ್ರದ ನಿರ್ದೇಶಕ ಲೋಕೇಶ್ ವಿದ್ಯಾಧರ ತಿಳಿಸಿದ್ದಾರೆ.
ಚಿತ್ರದಲ್ಲಿ ಲೋಕೇಶ್ ವಿದ್ಯಾಧರ, ಸುನಂದಾ ಕಲ್ಬುರ್ಗಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ದಾನಪ್ಪ, ಮಾಂತೇಶ್ ಹಳ್ಳೂರ, ತೇಜಸ್ ಶಿವರಾಜ್, ಕಿರಣ್ ಹೂಗಾರ, ಅಪೂರ್ವ, ಮುತ್ತುರಾಜ್ ಬುದ್ನಿ, ಕಿಟ್ಟಿ ತಾಳಿಕೋಟೆ, ಕುಮಾರ್ ಬಾಬು, ಸತೀಶ್ ಶೆಟ್ಟಿ, ಮಂಜುಳಾ ಅರಸ್, ಭಾವನಾ ಶಿಂಧೆ, ವಿದ್ಯಾ ಗಂಜಿಹಾಳ, ದಶರಥ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಮಲ್ಲಕಂಬ ಪ್ರದರ್ಶನವನ್ನು ಸಿದ್ಧಾರೂಢ ಹೂಗಾರ ಹಾಗೂ ಜೈ ಕರ್ನಾಟಕ ಮಲ್ಲಕಂಬ ತಂಡ ನಿರ್ವಹಿಸಿದ್ದು, ಸಂಭಾಷಣೆಯನ್ನು ಶಿವಂ ಬೆಂಗೇರಿ, ಸಾಹಿತ್ಯವನ್ನು ಲೋಕೇಶ್ ವಿದ್ಯಾಧರ, ಶಿವರಾಜ್ ಹಾಗೂ ಕಿನ್ನಾಳ ರಾಜ್ ರಚಿಸಿದ್ದಾರೆ. ಈ ಹಿಂದೆ ‘ಒಬ್ಬಟ್ಟು’ ಚಿತ್ರ ನಿರ್ದೇಶಿಸಿದ್ದ ಲೋಕೇಶ್ ವಿದ್ಯಾಧರ ಅವರೇ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಚಿತ್ರಕ್ಕೆ ಕೀರ್ತನ ಮೂವ್ಹಿ ಮೇಕರ್ಸ್ ಹಾಗೂ ಕೆಆರ್ಎಸ್ ಪ್ರೊಡಕ್ಷನ್ ನಿರ್ಮಾಪಕರಾಗಿದ್ದು, ಟ್ರೇಲರ್ ಬಿಡುಗಡೆ ಬಳಿಕ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.



