ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಖಾಸಗಿ ಶಾಲೆಯ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಕುಸಿದ ಗೋಡೆಯ ಪಕ್ಕದಲ್ಲಿದ್ದ ಕಟ್ಟಡದಲ್ಲಿ ವಾಸಿಸುತ್ತಿದ್ದ ಎರಡು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಅಪಾಯದ ಹಿನ್ನೆಲೆಯಲ್ಲಿ ಆ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಶಾಲೆಗೆ ರಜೆ ಘೋಷಿಸಲಾಗಿದೆ. ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ಗಳು ಕಟ್ಟಡವನ್ನು ಪರಿಶೀಲಿಸಿ ಸುರಕ್ಷಿತವಾಗಿದೆ ಎಂದು ವರದಿ ನೀಡಿದ ಬಳಿಕವೇ ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಸೂಚಿಸಲಾಗಿದೆ.
ಸ್ಥಳೀಯ ಆಡಳಿತವು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.



